ಸಾರಾಂಶ
- ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಸಮಿತಿ ಸಭೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲಾ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಗುರುತಿಸಿದ ಎಲ್ಲ ಅರ್ಹ ಮ್ಯಾನ್ಯುಯಲ್ ಸ್ಕ್ಯಾವೆಂಜರ್, ಸಫಾಯಿ ಕರ್ಮಚಾರಿಗಳನ್ನು ಸಮೀಕ್ಷೆ ಮಾಡಿ ಅವರಿಗೆ ಗುರುತಿನ ಚೀಟಿ, ನಿವೇಶನ ರಹಿತರಿಗೆ ನಿವೇಶನ ಹಾಗೂ ಪನರ್ವಸತಿ ಕಲ್ಪಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದಾವಣಗೆರೆ ಪಾಲಿಕೆಯಲ್ಲಿ 245, ಹರಿಹರ ನಗರಸಭೆ ವ್ಯಾಪ್ತಿಯಲ್ಲಿ 78 ಸೇರಿ ಒಟ್ಟು 388 ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿದ್ದಾರೆ. ಈ ಪೈಕಿ 372 ಸ್ಕ್ಯಾವೆಂಜರ್‌ಗಳಿಗೆ ಗುರುತಿನ ಚೀಟಿ ನೀಡಿದೆ. ಇನ್ನುಳಿದ 16ರಲ್ಲಿ 4 ಜನರು ಮರಣ ಹೊಂದಿದ್ದು, 12 ಫಲಾನುಭವಿಗಳು ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ಕಾರ್ಡ್ ವಿತರಿಸಲಾಗಿಲ್ಲ. ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಮಂಜೂರಾದ ಪೌರಕಾರ್ಮಿಕ, ಸೆಕ್ಯೂರಿಟಿ ಗಾರ್ಡ್, ವಾಹನ ಚಾಲಕ, ನೀರು ಸರಬರಾಜು ಸಹಾಯಕ, ಎಸ್.ಡಬ್ಲ್ಯೂ.ಎಂ. ಫೀಲ್ಡ್ ವರ್ಕರ್ ಸೇರಿ 9 ಜನರನ್ನು ಹೊರಗುತ್ತಿಗೆ ಆಧಾರದಡಿ ಹಾಗೂ ಲೋಡರ್ ಹುದ್ದೆಗಳಿಗೆ 3 ಕಾರ್ಮಿಕರನ್ನು ಕಾಯಂ ನೇಮಕ ಮಾಡಲಾಗಿದೆ ಎಂದರು.
ಶೌಚಾಲಯಗಳ ನಿರ್ವಹಣಾ ಟೆಂಡರ್, ಸಫಾಯಿ ಕರ್ಮಚಾರಿಗಳು ಮತ್ತು ಗುರುತಿಸಿದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಳಿಗೆ ಮೀಸಲಿಗೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆ ನಡೆಸಿ ಸ್ಕ್ಯಾವೆಂಜರ್‌ಗಳಿಗೆ ಪ್ರಥಮಾದ್ಯತೆ ನೀಡಬೇಕು. ನಿವೇಶನರಹಿತ 297 ಸ್ಕ್ಯಾವೆಂಜರ್ ಕುಟುಂಬಗಳಿಗೆ ಅಗತ್ಯವಾಗಿ ನಿವೇಶನ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಅಧಿಕಾರಿಗಳು ಪಾಲಿಕೆ ವ್ಯಾಪ್ತಿಗೊಳಪಡುವ ದೊಡ್ಡಬಾತಿ ಗ್ರಾಮದಲ್ಲಿ 8 ಎಕರೆ 8 ಗುಂಟೆ ಭೂಮಿ ಗುರುತಿಸಿದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.59 ಸ್ಕ್ಯಾವೆಂಜರ್ ಕುಟುಂಬಗಳಿಗೆ ವಸತಿ ಸೌಲಭ್ಯ:
ನಗರ ಸ್ಥಳೀಯ ಸಂಸ್ಥೆಗಳು ಸೇರಿ ಜಿಲ್ಲೆಯಲ್ಲಿ 388 ಸ್ಕ್ಯಾವೆಂಜರ್‌ಗಳ ಪೈಕಿ 59 ನಿವೇಶನ ಲಭ್ಯವಿರುವ ಕುಟುಂಬಗಳು ಎಂದು ಗುರುತಿಸಲಾಗಿದೆ. ಅದರಲ್ಲಿ ದೇವರಾಜ ಅರಸು ವಸತಿ ಯೋಜನೆಯಡಿ 16 ಫಲಾನುಭವಿಗಳ ಪಟ್ಟಿ ಅನುಮೋದನೆ ಪಡೆಯಲಾಗಿದೆ. ಬಾಕಿ ಉಳಿದ ಫಲಾನುಭವಿಗಳಿಗೆ ವಿವಿಧ ತಾಂತ್ರಿಕ ಮತ್ತು ದಾಖಲಾತಿಗಳ ಕಾರಣಗಳಿಂದ ಬಾಕಿಯಿದ್ದು, ಶೀಘ್ರದಲ್ಲೇ ಉಳಿದ ಫಲಾನುಭವಿಗಳಿಗೂ ಅನುಮೋದನೆ ಪಡೆದು, ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಹಾಂತೇಶ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ನಾಮ ನಿರ್ದೇಶಿತ ಸದಸ್ಯರಾದ ಶಂಕರ್, ರಘುಪತಿ, ಓಬಳೇಶ್, ಇಲಾಖೆಗಳ ಅಧಿಕಾರಿಗಳು, ಸಂಘಟನೆಗಳ ಪದಾಧಿಕಾರಿಗಳು ಇದ್ದರು.
- - -(ಕೋಟ್) ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಸರ್ಕಾರದ ಯೋಜನೆ, ಸಾಲ, ಸೌಲಭ್ಯಗಳನ್ನು ಸಮರ್ಪಕವಾಗಿ ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ಒದಗಿಸಿ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುನ್ನಲೆಗೆ ಬರಲು ಅಧಿಕಾರಿಗಳು ಸಹಕರಿಸಬೇಕು
- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ- - -
-13ಕೆಡಿವಿಜಿ38.ಜೆಪಿಜಿ:ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013ರ ಅನುಷ್ಠಾನ ಸಮಿತಿ ಸಭೆ ನಡೆಯಿತು.