ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಒಳಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಜಿಲ್ಲಾ ಬಲಗೈ ಸಮುದಾಯಕ್ಕೆ ಸೇರಿದ ಛಲವಾದಿ/ಹೊಲಯ ಒಳ ಮೀಸಲಾತಿ ಜಾಗೃತಿ ಸಮಿತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಗ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮೈಸೂರಿನ ಉರಿಲಿಂಗಿಪದ್ಧಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಒಳಮೀಸಲಾತಿ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಆದಿದ್ರಾವಿಡ, ಆದಿಕರ್ನಾಟಕ, ಆಡಿ ಆಂಧ್ರ ಎಂದು ವಿಂಗಡಿಸಿ ಶೇ.1 ರಷ್ಟು ಮೀಸಲಾತಿ ನೀಡಿರುವುದು ಖಂಡನೀಯ. ಅಲ್ಲದೇ ಛಲವಾದಿಗಳನ್ನೇ ಪ್ರತ್ಯೇಕವಾಗಿ ಮಾಡಿದ್ದು ವರದಿಯು ಅವೈಜ್ಞಾನಿಕವಾಗಿದೆ ಎಂದರು.ಬಲಗೈ ಸಂಬಂಧಿತ ಜಾತಿಗಳನ್ನು ಒಂದು ಗುಂಪು ಮಾಡಿ ಸೇರಿಸುವಂತೆ ನಾಗಮೋಹನದಾಸ್ ಅವರಿಗೆ ಅರ್ಜಿ ಸಲ್ಲಿಸಿದ್ದು ಪರಿಗಣನೆಗೆ ತೆಗೆದುಕೊಂಡಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ದೇಶದ 140 ಕೋಟಿ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ಅಂಬೇಡ್ಕರ್ ರವರ ವಾರಸುದಾರ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವುದು ಖಂಡನೀಯ. ಸರ್ಕಾರ ಈ ವರದಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಆ.16 ರಂದು ಸಚಿವ ಸಂಪುಟದಲ್ಲಿ ಒಳಮೀಸಲಾತಿ ಸಮೀಕ್ಷೆ ವರದಿ ಪುರಸ್ಕರಿಸಿದರೆ ಸರ್ಕಾರವನ್ನು ತಿಥಿ ಮಾಡಲು ತೀರ್ಮಾನಿಸಲಾಗುವುದು ಎಂದರು.ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಬಲಗೈ ಸಮುದಾಯ ಎಂದೂ ಒಳ ಮೀಸಲಾತಿ ಕೇಳಿಲ್ಲ. ಒಳ ಮೀಸಲಾತಿ ಅನುಭವಿಸುತ್ತಾ ಬಂದಿರುವ ವರ್ಗಗಳು ಇಂದು ಅವರವರ ಸಮುದಾಯದ ಸಮಾವೇಶಗಳು ನಡೆಯುವ ಸಂದರ್ಭದಲ್ಲಿ ಅವರು ಅಂಕಿ ಅಂಶವನ್ನು ಸರಿಯಾಗಿ ಗ್ರಹಿಸದೆ ಸರ್ಕಾರ ಬಂದ ಸಂದರ್ಭದಲ್ಲಿ ಆಡಳಿತ ಮಾಡಿದ ಅನೇಕ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಸುಳ್ಳು ಅಂಕಿಅಂಶಗಳನ್ನು ಕೊಟ್ಟು ಮೀಸಲಾತಿ ಪಡೆಯುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಧಿಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಔಟ್ ಡೋರ್ ಸರ್ವೆ ಆಗಿತ್ತು. ಅದರಲ್ಲಿ ಪರಿಶಿಷ್ಠ ಜಾತಿಯ ಬಲಗೈ ಸಂಖ್ಯೆ ಬಹಳ ಎತ್ತರದಲ್ಲಿತ್ತು. ಅದು ಏಕೆ ಅನುಷ್ಠಾನಗೊಳ್ಳಲಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟ ಮೇಲೆ ಸಮೀಕ್ಷೆ ವರದಿ ಮಂಡಿಸಿದ್ದಾರೆ. ಅದು ಅಂತಿಮ ಅಲ್ಲ. ಸರ್ಕಾರ ವರದಿಯನ್ನು ಸ್ವೀಕರಿಸಿದೆ ಹೊರತು ಪುರಸ್ಕರಿಸಿಲ್ಲ. ಅದನ್ನು ಸಂಪುಟ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಬೇಕು. ಸಮುದಾಯ ಸಚಿವರು, ಶಾಸಕರು ಸಮುದಾಯ ಪರವಾಗಿದ್ದೇವೆ. ಅನ್ಯಾಯ ವಾಗುವುದಕ್ಕೆ ಬಿಡುವುದಿಲ್ಲ ಎಂದರು.ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಸರ್ಕಾರಕ್ಕೆ ಸಲ್ಲಿಸಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ವರದಿಯನ್ನು ಸರ್ಕಾರ ಪುರಸ್ಕರಿಸಿ ಪರಿಶೀಲಿಸಬೇಕು ಎಂದರು.
ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿ, 16 ರಂದು ಸಚಿವ ಸಂಪುಟದಲ್ಲಿ ಒಳಮೀಸಲಾತಿ ಸಮೀಕ್ಷ ವರದಿಯನ್ನು ಸರ್ಕಾರ ಪುರಸ್ಕಾರ ಮಾಡಿದರೆ ಸಮುದಾಯದ ಮೂರು ಸಚಿವರು ರಾಜೀನಾಮೆ ನೀಡಬೇಕು. ಆ. 17 ರಿಂದ ಬೀದರ್‌ನಿಂದ ಚಾಮರಾಜನಗರದಿಂದ ಪಾದಯಾತ್ರೆ ಕೈಗೊಂಡು ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಆ. 20 ರಂದು ಕರ್ನಾಟಕ ಬಂದ್ ಮಾಡಬೇಕಾಗುತ್ತದೆ ಎಂದರು.ಜಿಲ್ಲಾ ಬಲಗೈ ಸಮುದಾಯಕ್ಕೆ ಸೇರಿದ ಛಲವಾದಿ/ಹೊಲಯ ಒಳ ಮೀಸಲಾತಿ ಜಾಗೃತಿ ಸಮಿತಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್, ಮಾಜಿ ಶಾಸಕ ಎಸ್.ಬಾಲರಾಜ್, ನಿವೃತ್ತ ಐಎಫ್ ಎಸ್ ಅಧಿಕಾರಿ ಡಾ.ರಾಜು, ವಾಣಿ ಶಿವರಾಂ, ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ, ಮೋಹನ್ ನಗು, ನಾಗಯ್ಯ, ಹೆಬ್ಬಸೂರು ರಂಗಸ್ವಾಮಿ, ನಾಗರಾಜು, ನಲ್ಲೂರು ಸೋಮೇಶ್ವರ, ಗಡಿ ಯಜಮಾನರಾದ ಹರದನಹಳ್ಳಿ ರವಿಕುಮಾರ್, ಹೊಂಗನೂರು ಈರಣ್ಷ, ಮಂಗಲದ ರಂಗಸ್ವಾಮಿ, ಚಾಮರಾಜನಗರ ನಾಗರಾಜು, ಕೊಳ್ಳೇಗಾಲ ಭೀಮನಗರದ ಚಿಕ್ಕಮಾಳಿಗ, ಆನಂದಮೂರ್ತಿ, ಶಾಂತಕುಮಾರ್, ಪುಟ್ಟರಾಜ, ಸಿ.ಎಂ.ಶಿವಣ್ಣ ಇದ್ದರು.