ನಾಡಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಬುಧವಾರ ಕರೆದಿದ್ದ ಅಧಿಕಾರಿಗಳು ಮತ್ತು ಭಕ್ತರ ಪೂರ್ವಭಾವಿ ಸಭೆ ಕಾಟಾಚಾರವಾಗಿತ್ತು.

ಹೂವಿನಹಡಗಲಿ: ನಾಡಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಬುಧವಾರ ಕರೆದಿದ್ದ ಅಧಿಕಾರಿಗಳು ಮತ್ತು ಭಕ್ತರ ಪೂರ್ವಭಾವಿ ಸಭೆ ಕಾಟಾಚಾರವಾಗಿತ್ತು.ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸಮುದಾಯ ಭವನದಲ್ಲಿ ಜರುಗಿದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ನಡಾವಳಿ ಸಭೆ ಅರೆಬರೆಯಾಗಿತ್ತು. ಸಭೆಗೆ ಬಂದ ಭಕ್ತರಿಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಜವಾಬ್ದಾರಿಗಳೇನು?, ಕಳೆದ ಬಾರಿಗಿಂತ ಈ ಬಾರಿ ವಿಭಿನ್ನವಾಗಿ ಕೈಗೊಂಡಿರುವ ಕ್ರಮಗಳೇನು?, ಕುಡಿವ ನೀರು, ಸ್ವಚ್ಛತೆ, ವಿದ್ಯುತ್‌ ವ್ಯವಸ್ಥೆ, ಸಾರಿಗೆ ಸಂಪರ್ಕ, ಧ್ವನಿ ವರ್ಧಕ ಬಳಕೆ, ಕಾರ್ಣಿಕೋತ್ಸವ ಸ್ಪಷ್ಟವಾಗಿ ಭಕ್ತರಿಗೆ ಕೇಳಲು ಮಾಡಿರುವ ವ್ಯವಸ್ಥೆ, ಕಾಣೆಯಾದ ಮಕ್ಕಳ ಬಗ್ಗೆ ಜಾಗೃತಿ, ಜನ ಜಾನುವಾರು ಆರೋಗ್ಯ ಕಾಳಜಿ, ಪೊಲೀಸ್‌ ಬಂದೋಬಸ್ತ್‌, ರಸ್ತೆ ದುರಸ್ಥಿ ಹೀಗೆ ಹತ್ತಾರು ಪ್ರಶ್ನೆಗಳಿಗೆ ಸಭೆಯಲ್ಲಿ ಉತ್ತರವೇ ಸಿಗಲಿಲ್ಲ.

ಸಭೆ ಆರಂಭವಾಗುತ್ತಿದಂತೆಯೇ ಸಭಾ ನಡಾವಳಿ ಮರೆತು, ನೇರವಾಗಿ ಜಾತ್ರೆಯಲ್ಲಿ ಆಗುವ ಸಮಸ್ಯೆಗಳನ್ನು ಜನರಿಂದ ಆಹ್ವಾನಿಸಿದರು.

ಜಾತ್ರೆಗೆ ಬರುವ ಮಹಿಳೆಯರು ದೇಗುಲದ ಮುಂದೆ ಬಯಲಿಲ್ಲ ಸ್ನಾನ ಮಾಡುತ್ತಾರೆ. ನಾಲ್ಕಾರು ಮಹಿಳೆಯರು ಸುತ್ತಲೂ ಬಟ್ಟೆ ಮರೆ ಮಾಡಿಕೊಂಡು ಬಟ್ಟೆ ಬದಲಾಯಿಸುವ ಪರಿಸ್ಥಿತಿ ಇದೆ. ಶ್ರೀಮಂತ ದೇಗುಲವಾದರೂ ಅಭಿವೃದ್ಧಿ ಕಂಡಿಲ್ಲ. ಪ್ರಸಾದದ ಬಳಿಕ ಅಳಿದುಳಿದ ಆಹಾರ ಚರಂಡಿ ಸೇರಿ ಗ್ರಾಮವೇ ದುರ್ನಾತ ಬೀರುತ್ತದೆ. ಹುಣ್ಣಿಮೆ, ಭಾನುವಾರ ದಿನ ಸಿಕ್ಕಾಪಟ್ಟೆ ಟ್ರಾಫಿಕ್‌ ಜಾಮ್‌ ಆಗಲಿದೆ. ಜಾತ್ರೆಯ ನಂತರ ಗ್ರಾಮ ಸ್ವಚ್ಛತೆ ಮಾಡದ ಕಾರಣ ಸಾಂಕ್ರಾಮಿಕ ಕಾಯಿಲೆಯ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಿ ಎಂದು ಮಾಲತೇಶ ಕೋರಿ ಸಭೆ ತಿಳಿಸಿದರು.

ಡೆಂಕಣ ಮರಡಿಯಲ್ಲಿ ಪ್ರತಿ ವರ್ಷ ಬಂದ ಭಕ್ತರಿಗೆ ನಾನೇ ಸ್ವಯಂ ಪ್ರೇರಣೆಯಿಂದ ಭಕ್ತರಿಗೆ ಕೊಳವೆಬಾವಿ ನೀರು ಪೂರೈಕೆ ಮಾಡುವೆ. ಆದರೆ ಇದರಲ್ಲೇ ಅಧಿಕಾರಿಗಳು ನಾವು ಮಾಡಿದ ವ್ಯವಸ್ಥೆ ಎಂದು ಹಣ ನುಂಗಿದ್ದಾರೆ. ಜಿಲ್ಲಾಡಳಿತಕ್ಕೂ ತಪ್ಪು ಮಾಹಿತಿ ನೀಡುವ ಅಧಿಕಾರಿಗಳಿದ್ದಾರೆ ಎಂದು ದೂರಿದರು.

ದೇವಸ್ಥಾನ ಬಾಬುದಾರ ಅನಿಲ್‌ ದಳವಾಯಿ ಮಾತನಾಡಿ, ಎ ಗ್ರೇಡ್‌ ದೇವಸ್ಥಾನವಾಗಿದೆ. ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿ ನಿಯೋಜನೆ ಮಾಡಬೇಕು. ಈಗಿನ ಇಒ ಇವರಿಗೆ 4-5 ದೇವಸ್ಥಾನಕ್ಕೆ ನಿಯೋಜನೆಯಾಗಿದ್ದಾರೆ. ದೇವಸ್ಥಾನದ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಈಗಿರುವ ಅಧಿಕಾರಿಗಳು ಅಸಹಾಯಕರಾಗಿದ್ದಾರೆಂದು ಹೇಳಿದರು.

ಇಷ್ಟೆಲ್ಲ ಸಮಸ್ಯೆಗಳನ್ನು ಶಾಸಕ ಕೃಷ್ಣನಾಯ್ಕ ಪಟ್ಟಿ ಮಾಡಿಕೊಂಡರು. ಆದರೆ ಯಾರ ವಿರುದ್ಧ ಯಾವ ಕ್ರಮ ಎಂಬುದು ಹೇಳಿದೇ ಮತ್ತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾಧ್ಯಮಕ್ಕೆ ನೀಡುತ್ತೇವೆಂದು ಹೇಳಿದಾಗ, ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾಧ್ಯಮಕ್ಕೆ ಮಾಹಿತಿ ರಿಲೀಜ್‌ ಮಾಡುತ್ತೇವೆಂದು ಹೇಳಿ ಸಭೆ ಮುಕ್ತಾಯಗೊಳಿಸಿದರು.

ಸಭೆಯಲ್ಲಿ ಶಾಸಕ ಕೃಷ್ಣ ನಾಯ್ಕ, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಎಸ್ಪಿ ಎಸ್‌.ಜಾಹ್ನವಿ, ದೇವಸ್ಥಾನ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌, ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ಎಚ್‌.ಸವಿತಾ, ಮೈಲಾರ ಗ್ರಾಪಂ ಅಧ್ಯಕ್ಷೆ ಜಾನಕಮ್ಮ, ಡಿವೈಎಸ್ಪಿ ಸಂತೋಷ ಚೌಹಾಣ್‌, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ್‌ ಕವಿತಾ, ಇಒ ಪರಮೇಶ್ವರ, ಸಿಪಿಐ ದೀಪಕ್‌ ಬೂಸರೆಡ್ಡಿ, ದೇಗುಲ ಇಒ ಮಲ್ಲಪ್ಪ ಇದ್ದರು.

ಬಹಿಷ್ಕಾರ ಎಚ್ಚರಿಕೆ:

ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಣಿಕ ನುಡಿಯುವ ಗೊರವಯ್ಯ, ಪ್ರಧಾನ ಅರ್ಚಕ ಪ್ರಮೋದ್‌ ಭಟ್‌ ಸೇರಿದಂತೆ ಎಲ್ಲ ಬಾಬುದಾರರು ನಮ್ಮ ಬೇಡಿಕೆ ಈಡೇರದಿದ್ದರೆ ಈ ಬಾರಿ ನಾವು ಜಾತ್ರೆಯನ್ನು ಬಹಿಷ್ಕಾರ ಮಾಡುತ್ತೇವೆ. ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದಿಲ್ಲವೆಂದು ಪಟ್ಟು ಹಿಡಿದ್ದರು. ಈ ಕುರಿತು ಶಾಸಕ ಕೃಷ್ಣನಾಯ್ಕ ಮತ್ತು ಡಿಸಿ ಕವಿತಾ ಎಸ್‌.ಮನ್ನಿಕೇರಿ ಅವರ ಬೇಡಿಕೆಯನ್ನು ಗುಪ್ತ ಸಭೆ ಮಾಡಿ ಆಲಿಸಿದ್ದಾರೆ.

ಫೆ.4 ರಂದು ಕಾರ್ಣಿಕ:

ಮೈಲಾರಲಿಂಗೇಶ್ವರ ಜಾತ್ರೆಯು ಜ.25ರಿಂದ ಆರಂಭವಾಗಿ ಫೆ.5ರವರೆಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಇದರಲ್ಲಿ ಫೆ.4ರಂದು ಸಂಜೆ 5.30ಕ್ಕೆ ಗೊರವಯ್ಯನಿಂದ ಕಾರ್ಣಿಕ ಜರುಗಲಿದೆ.