ಸಾರಾಂಶ
ಅಂತರ್ಜಲ ಅಭಿವೃದ್ಧಿಗಾಗಿ ಕೆರೆ ಅಭಿವೃದ್ಧಿ ಅವಶ್ಯಕವಾಗಿದೆ. ಅಂತರ್ಜಲದ ಬಗ್ಗೆ ರೈತರು ಕಾಳಜಿ ವಹಿಸಬೇಕು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿನ ಸಮೀಪವಿರುವ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದ ಸಾರ್ವಜನಿಕ ಕೇಳಗಿನ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೂರ್ವಭಾವಿ ಸಭೆಯನ್ನು ಶುಕ್ರವಾರ ಆಯೋಜಿಸಲಾಯಿತು.ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲೆಯ ನಿರ್ದೇಶಕರಾದ ಲೀಲಾವತಿ ಮಾತನಾಡಿ, ಸಾಮಾಜಿಕ ಅಭಿವೃದ್ಧಿಯ ಹಲವು ಕಾರ್ಯ ಚಟುವಟಿಕೆಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಉತ್ತಮವಾಗಿ ತೊಡಗಿಸಿಕೊಂಡಿದೆ. ಇದರಿಂದ ಸ್ವಾವಲಂಬಿ ಬದುಕನ್ನು ಸಂಘದ ಸದಸ್ಯರು ಪಡೆಯುತ್ತಿದ್ದಾರೆ. ಸಂಘದ ಸದಸ್ಯರಿಗೆ ಸಹಕಾರದ ಜೊತೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಮಾಡಲಾಗುತ್ತಿದೆ. ನಮ್ಮ ಊರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದ ಪ್ರತಿ ತಾಲೂಕಿನಲ್ಲಿ ಕೆರೆ ಅಭಿವೃದ್ಧಿ ಕಾರ್ಯವನ್ನು ಪ್ರತಿ ವರ್ಷ ಮಾಡುತ್ತಿದ್ದೇವೆ. ಈ ಹುಲಸೆ ಗ್ರಾಮದ ಕೆರೆ ಅಭಿವೃದ್ಧಿಯ ಕಾರ್ಯ ಚಟುವಟಿಕೆಗಳಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕಾಗಿ ಕೇಳಿಕೊಂಡರು.
ಸೋಮವಾರಪೇಟೆ ಯೋಜನಾಧಿಕಾರಿ ರೋಹಿತ್ ಪ್ರಸ್ತಾವಿಕ ಮಾತನಾಡಿ, ಯೋಜನೆಯ ಈ ಸಮಾಜಮುಖಿ ಕಾರ್ಯದಲ್ಲಿ ಒಂದು ಊರಿನ ಕೆರೆ ಅಭಿವೃದ್ಧಿ. ಆದರೆ ಊರಿನ ಎಲ್ಲ ಕೃಷಿ ಭೂಮಿಗೆ ಅಭಿವೃದ್ಧಿಯಾದಂತೆ. ಅಂತರ್ಜಲ ವೃದ್ಧಿಗಾಗಿ ಕೆರೆ ಅಭಿವೃದ್ಧಿ ಅವಶ್ಯಕವಾಗಿದೆ. ಇಂದಿನ ದಿನಗಳಲ್ಲಿ ಕೃಷಿ ಮಾಡಲು ಎಲ್ಲ ತಯಾರಿಯನ್ನು ಮಾಡುತ್ತೇವೆ. ಆದರೆ ಕೃಷಿಗೆ ಪ್ರಮುಖವಾಗಿ ಬೇಕಾಗಿರುವಂತಹ ನೀರಿನ ಅಂತರ್ಜಲದ ಬಗ್ಗೆ ರೈತರು ಕಾಳಜಿ ವಹಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ್, ಮೇಲ್ವಿಚಾರಕರಾದ ರಾಜಣ್ಣ, ನಾಗರಾಜ್, ಹುಲಸೆ ಗ್ರಾಮದ ಪ್ರಮುಖ ಭರತ್, ಲೋಕೇಶ್, ಗೋವಿಂದ ಉಮೇಶ್ ಭಾಗವಹಿಸಿದ್ದರು.