ಧಾರವಾಡ:

ಪ್ರಜಾಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲಾಡಳಿತದ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಕ್ಕೆ ಕರೆತಂದು, ಜನರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ತಾಲೂಕಿನ ಮನಸೂರು, ಮನಗುಂಡಿ, ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಪ್ರಜಾಸೇವಾ ಆಂದೋಲನ ಸಭೆ ಜರುಗಿಸಿ, ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿ ಹಾಗೂ ಜನರ ಕಷ್ಟಗಳ ನಿವಾರಣೆಗಾಗಿ ಯಾವುದೇ ರಾಜಕೀಯ ಪಕ್ಷದ ಭೇದ-ಭಾವವಿಲ್ಲದೆ ಎಲ್ಲ ಸಮಾಜದ ಮುಖಂಡರು ಪಕ್ಷಾತೀತವಾಗಿ ಒಂದಾಗಿ ಬರಬೇಕು. ರಾಜಕೀಯ ಪಕ್ಷಗಳು ಯುವ ಪೀಳಿಗೆಗೆ ಸಮಾನತೆ ಪ್ರೀತಿ, ಕೋಮು ಸೌಹಾರ್ದತೆ ಕೊಡುಗೆ ನೀಡಬೇಕು ಎಂದರು.

ಪ್ರತಿಯೊಂದು ಹಳ್ಳಿಯಲ್ಲೂ ಸಾರ್ವಜನಿಕರ, ಅಧಿಕಾರಿಗಳ ಸಮ್ಮುಖದಲ್ಲಿ ಬಸ್ ವ್ಯವಸ್ಥೆ, ರಸ್ತೆ ದುರಸ್ತಿ, ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಮದ್ಯ ಮಾರಾಟ ಬಂದ್‌ ಮಾಡುವುದು ಸೇರಿದಂತೆ ವಿವಿಧ ಸಮಸ್ಯೆ ಆಲಿಸಿದ ಸಚಿವರು, ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಒದಗಿಸಿದರು. ಕೆಲವು ಸಮಸ್ಯೆಗಳನ್ನು ಅಧಿಕಾರಿಗಳಿಗೆ ವೀಕ್ಷಿಸಿ, ಪರಿಶೀಲಿಸಿ ಬಗೆಹರಿಸುವಂತೆ ಸೂಚಿಸಿದರು.ಮನಸೂರು ಗ್ರಾಮದಲ್ಲಿ ಬರಗಾಲದ ನಿಮಿತ್ತ ರೈತರಿಗೆ ಮೇವು ಬೀಜ ವಿತರಣೆ ಹಾಗೂ ಮನಸೂರು, ಮನಗುಂಡಿ ಗ್ರಾಮದಲ್ಲಿ 10 ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‌ಬುಕ್‌ ವಿತರಿಸಲಾಯಿತು. ಮನಸೂರು–ಮನಗುಂಡಿ–ಬೆಳ್ಳಿಗಟ್ಟಿ ರಸ್ತೆ ಅಭಿವೃದ್ಧಿ ಹಾಗೂ ಮನಸೂರು ಗ್ರಾಮದ ವ್ಯಾಪ್ತಿಯಲ್ಲಿ ಪುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಲಾಡ್‌ ಭೂಮಿಪೂಜೆ ನೆರವೇರಿಸಿದರು.

ಮುಮ್ಮಿಗಟ್ಟಿ ಗ್ರಾಮದಲ್ಲಿ 12 ಎಮ್ಮೆ ಮತ್ತು ಹಸುಗಳ ಪ್ರಾಣ ಹಾನಿ ಆಗಿರುವುದರಿಂದ ರೈತರಿಗೆ ₹ 1.80 ಲಕ್ಷ ಚೆಕ್‌ನ್ನು ಸಚಿವರು ವಿತರಿಸಿದರು. ಕಾರ್ಮಿಕರ ಇಲಾಖೆ ವತಿಯಿಂದ ಕಾರ್ಮಿಕರ ಮಕ್ಕಳ ವಿವಾಹಕ್ಕಾಗಿ ಪೋಷಕರಿಗೆ ₹ 60 ಸಾವಿರ ಸಹಾಯಧನದ ಎರಡು ಚೆಕ್ ವಿತರಿಸಿದರು. ವಿಕಾಸನಗರ, ಉಪಗ್ರಾಮದ ಭೂ ಗ್ಯಾರಂಟಿಯ ಹಕ್ಕುಪತ್ರ ಫಲಾನುಭವಿಗಳಿಗೆ ಸಚಿವರು ವಿತರಿಸಿದರು.


ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಭುವನೇಶ ಪಾಟೀಲ, ಧಾರವಾಡ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ತಾಪಂ ಇಒ ಗಂಗಾಧರ ಕಂದಕೂರ, ಮನಸೂರು ಗ್ರಾಪಂ ಪಿಡಿಒ ಬಿ.ಡಿ. ಹಿರೇಮಠ ಸೇರಿದಂತೆ ಅಧಿಕಾರಿಗಳು ಇದ್ದರು.