ಜನರ ಅಗತ್ಯ ಮತ್ತು ಆಶೋತ್ತರಗಳಿಗೆ ಅನುಗುಣವಾಗಿ ಜನರ ಪಾಲ್ಗೊಳ್ಳುವಿಕೆಯ ಮೂಲಕವೇ ಜನಪರ ಯೋಜನೆಗಳನ್ನು ರೂಪಿಸಬೇಕು. ಈ ಹಿಂದೆ ಮೇಲ್ಮಟ್ಟದಿಂದ ಕೆಳಹಂತದವರೆಗೆ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಗ್ರಾಮ ಮತ್ತು ವಾರ್ಡ್ ಮಟ್ಟದಿಂದಲೇ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ನೈಜ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಗದಗ

ಜನರ ಅಗತ್ಯ ಮತ್ತು ಆಶೋತ್ತರಗಳಿಗೆ ಅನುಗುಣವಾಗಿ ಜನರ ಪಾಲ್ಗೊಳ್ಳುವಿಕೆಯ ಮೂಲಕವೇ ಜನಪರ ಯೋಜನೆಗಳನ್ನು ರೂಪಿಸಬೇಕು. ಈ ಹಿಂದೆ ಮೇಲ್ಮಟ್ಟದಿಂದ ಕೆಳಹಂತದವರೆಗೆ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಗ್ರಾಮ ಮತ್ತು ವಾರ್ಡ್ ಮಟ್ಟದಿಂದಲೇ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ನೈಜ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ನಗರದ ಜಿಪಂ ಸಭಾ ಭವನದಲ್ಲಿ ಸೋಮವಾರ ಜರುಗಿದ ಜನಪರ ಯೋಜನೆಗಳ ರೂಪಿಸುವಿಕೆ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯತಂತ್ರದ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದಂತೆ ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯ ಹಾಗೂ ಅಗತ್ಯಗಳನ್ನು ಆಧರಿಸಿ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುವುದು. ಮೀಸಲಾತಿ ವ್ಯವಸ್ಥೆಯಿಂದ ಸಮಾಜದ ಎಲ್ಲ ಸಮುದಾಯಗಳಿಗೂ ಅಧಿಕಾರದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತಿದೆ. ಆದರೆ, ಅಧಿಕಾರವನ್ನು ಸಮರ್ಪಕವಾಗಿ ಚಲಾಯಿಸಲು ಅಗತ್ಯವಾದ ಅವಕಾಶ ಮತ್ತು ಬೆಂಬಲವನ್ನು ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ತಿಳಿಸಿದರು.

ಯೋಜನಾ ಇಲಾಖೆ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ನಿಗದಿತ ಹಂತಗಳಲ್ಲಿ ಯೋಜನೆ ರೂಪಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಗದಗ ಜಿಲ್ಲೆಯಲ್ಲಿ ಈ ಹಿಂದೆಯೂ ಸಚಿವರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಯೋಜನೆಗಳ ರೂಪಿಸುವಿಕೆ ಕುರಿತು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದು ಸೂಚಿಸಿದರು.

ಗ್ರಾಮ, ವಾರ್ಡ್, ಗ್ರಾಪಂ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿ ಅಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಅಧಿಕಾರಿಗಳು ಈ ಪ್ರಕ್ರಿಯೆಯನ್ನು ಕೇವಲ ಆಡಳಿತಾತ್ಮಕ ಕಾರ್ಯವೆಂದು ಪರಿಗಣಿಸದೆ, ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಿ ಜವಾಬ್ದಾರಿಯಿಂದ ನಿರ್ವಹಿಸಬೇಕು. ಒಮ್ಮೆ ನಿಯಮಾನುಸಾರ ಯೋಜನೆ ಸಿದ್ಧಪಡಿಸಿ ಸಲ್ಲಿಸಿದ ನಂತರ ಅದರಲ್ಲಿ ಯಾರಿಂದಲೂ ಇಚ್ಛಾನುಸಾರ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಕಾನೂನುಬದ್ಧವಾಗಿ ರೂಪುಗೊಳ್ಳುವ ಈ ಯೋಜನೆಗಳ ಅನುಷ್ಠಾನದಲ್ಲಿ ಎಲ್ಲ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ವಿಕೇಂದ್ರೀಕರಣವು ಸ್ಥಳೀಯ ಆಡಳಿತದ ಮೂಲ ತತ್ವವಾಗಿದೆ. ಸ್ಥಳೀಯವಾಗಿ ಅಗತ್ಯವಿರುವ ಕಾಮಗಾರಿಗಳನ್ನು ಗುರುತಿಸಿ, ಅವುಗಳನ್ನು ಆದ್ಯತೆಯ ಮೇರೆಗೆ ಪಟ್ಟಿ ಮಾಡಿ ಅನುಷ್ಠಾನಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಜಿಪಂ ಸಿಒ ಮುಕುಲ್ ಜೈನ್ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಡಿಎಫ್‌ಓ ಸಂತೋಷಕುಮಾರ್, ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ಕೃಷ್ಣ ಪರಾಪುರ, ಸಿದ್ದು ಪಾಟೀಲ, ಸುಜಾತ ದೊಡ್ಡಮನಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಜನರ ಯೋಜನೆ ಸಿದ್ಧಪಡಿಸಲು ನಿಗದಿಪಡಿಸಿದ ವೇಳಾಪಟ್ಟಿ

ನ.5ರಿಂದ ನ.10ರ ವರೆಗೆ ಗ್ರಾಪಂ ವ್ಯಾಪ್ತಿಯಲ್ಲಿ ವಾರ್ಡ್ ಸಭೆಗಳನ್ನು ಆಯೋಜಿಸುವುದು. ನ.11ರಿಂದ ನ.21ರ ವರೆಗೆ ವಿಶೇಷ ಗ್ರಾಮಸಭೆ (ಮಹಿಳೆ, ಮಕ್ಕಳು, ವಿಶೇಷಚೇತನರು, ಹಿರಿಯ ನಾಗರಿಕರು, ಪಜಾ, ಪಪಂ)ಗಳನ್ನು ಆಯೋಜಿಸುವುದು. ನ.23ರಿಂದ ನ.30ರವರೆಗೆ ಗ್ರಾಪಂ ಸಭೆಗಳನ್ನು ನಡೆಸುವುದು, (ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಸೇರಿದಂತೆ). ಡಿ.1ರಿಂದ ಡಿ. 5ರವರೆಗೆ ತಾಪಂ ಸಭೆಗಳನ್ನು ಆಯೋಜಿಸುವುದು (ಹಣಕಾಸು, ಸಮಿತಿ ಸೇರಿದಂತೆ) ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಸೇರಿದಂತೆ). ಡಿ. 7ರಿಂದ ಡಿ. 11ರ ವರೆಗೆ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಗಳನ್ನು ಆಯೋಜಿಸುವುದು. ಡಿ. 14ರಿಂದ ಡಿ. 19ರ ವರೆಗೆ ಜಿಪಂ ಸಭೆ ಆಯೋಜಿಸುವುದು (ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಸೇರಿದಂತೆ). ಡಿ. 21ರಿಂದ ಡಿ. 28ರ ವರೆಗೆ ಜಿಲ್ಲಾ ಯೋಜನಾ ಸಮಿತಿ ಸಭೆಗಳನ್ನು ಆಯೋಜಿಸುವುದು ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.