ಯಲಬುರ್ಗಾ: ಕಚೇರಿ ಕೆಲಸಕ್ಕೆ ಬರುವ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳು ಸಕಾಲಕ್ಕೆ ದೊರೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಹೇಳಿದರು.
ಪಟ್ಟಣದ ಹಳೇ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನೂತನ ತಾತ್ಕಾಲಿಕ ತಹಸೀಲ್ದಾರ್ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಯಾವುದೇ ಕೆಲಸ ಅನಗತ್ಯವಾಗಿ ವಿಳಂಬ ಮಾಡದೆ ತ್ವರಿತವಾಗಿ ಪೂರ್ಣಗೊಳಿಸಬೇಕು.
ಕಂದಾಯ ಇಲಾಖೆಯು ಜನರೊಂದಿಗೆ ಅತ್ಯಂತ ನಿಕಟವಾಗಿ ಸಂಪರ್ಕ ಹೊಂದಿರುವ ಇಲಾಖೆಯಾಗಿದ್ದು, ಪ್ರತಿದಿನ ಸಾಕಷ್ಟು ಜನರು ವಿವಿಧ ಕೆಲಸಗಳಿಗಾಗಿ ಕಚೇರಿಗೆ ಆಗಮಿಸುತ್ತಾರೆ.ಆದ್ದರಿಂದ ಪ್ರತಿಯೊಬ್ಬ ಅರ್ಜಿದಾರರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಅಧಿಕಾರಿಗಳ ವರ್ತನೆಯೇ ಸರ್ಕಾರದ ಆಡಳಿತದ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಮೂಡಿಸುತ್ತದೆ. ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡಿಸುವುದು ಅಥವಾ ಕಡತ ವಿಳಂಬ ಮಾಡುವುದು ಸರಿಯಲ್ಲ. ಸರ್ಕಾರ ನಿಗದಿಪಡಿಸಿರುವ ಸೇವಾ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡಿ ಜನರಿಗೆ ತ್ವರಿತ ಸೇವೆ ಒದಗಿಸಬೇಕು ಎಂದರು.ತಹಸೀಲ್ದಾರ್ ಪ್ರಕಾಶ ನಾಶಿ ಮಾತನಾಡಿ, ಪಟ್ಟಣದಲ್ಲಿ ₹೧೮ ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಪ್ರಜಾಸೌಧ ಕಟ್ಟಡದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಹೊಸ ಕಟ್ಟಡ ನಿರ್ಮಾಣಗೊಂಡ ನಂತರ ವಿವಿಧ ಸರ್ಕಾರಿ ಕಚೇರಿಗಳು ಒಂದೇ ಸಮುಚ್ಚಯದಲ್ಲಿ ಕಾರ್ಯ ನಿರ್ವಹಿಸಲಿವೆ. ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ವಿವಿಧ ಸೇವೆಗಳು ದೊರೆಯಲಿವೆ. ಇದರಿಂದ ಆಡಳಿತ ವ್ಯವಸ್ಥೆ ಮತ್ತಷ್ಟು ಸುಗಮವಾಗಲಿದ್ದು, ಜನರ ಸಮಯ ಹಾಗೂ ಹಣ ಉಳಿತಾಯವಾಗಲಿದೆ ಎಂದರು.
ಈ ಸಂದರ್ಭ ಆಹಾರ ಇಲಾಖೆ ಉಪನಿರ್ದೇಶಕ ವಿಶ್ವನಾಥಗೌಡ, ಕುಕನೂರು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಉಪ ತಹಸೀಲ್ದಾರ ಮಹಾಂತಗೌಡ, ವಿಜಯಕುಮಾರ ಗುಂಡೂರು, ಮಲ್ಲಿಕಾರ್ಜುನ ಶಾಸ್ತ್ರಿಮಠ, ಪಪಂ ಮುಖ್ಯಾಧಿಕಾರಿ ನಾಗೇಶ, ಮಂಜುನಾಥ ಮೇಟಿ, ಮಹೇಶ, ಪಿ.ಬಿ.ಕುಂಬಾರ, ಹಸೇನ್ ಎಂ, ಗುರುರಾಜ ರಾಮಶೆಟ್ಟಿ, ಪ್ರೇಮಾ, ಶೃತಿ, ಹನುಮಗೌಡ ಪಾಟೀಲ್, ಎಂ.ದೇವರಡ್ಡಿ, ಪರ್ವೇಜ್, ರೆಹಮಾನ್, ಕಂದಾಯ, ಸರ್ವೇ, ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತಿತರರು ಇದ್ದರು.