ಏಕನಾಥ ಜಿ ಮೆದಿಕೇರಿ ಹನುಮಸಾಗರ
ಬೆಳಕಿನ ವೇದಿಕೆಯಲ್ಲಿ ಕಲಾವಿದರು ಮಿಂಚಿದರೆ, ಅವರ ಯಶಸ್ಸಿನ ಹಿಂದೆ ನಿಂತು ಶ್ರಮಿಸುವ ಅನೇಕ ಕಲಾವಿದರು ಎಲೆಮರೆ ಕಾಯಿಯಂತೆ ಇರುತ್ತಾರೆ. ಅಂತಹ ಅಪರೂಪದ ಕಲಾಸಾಧಕರಲ್ಲಿ ಹಿರಿಯ ರಂಗಕರ್ಮಿ ಹಾರ್ಮೋನಿಯಂ ಮಾಸ್ಟರ್ ವಿರೂಪಾಕ್ಷಪ್ಪ ಗಾಯದ (ಧುತ್ತರಗಿ) ಪ್ರಮುಖರು. ಸುಮಾರು ಆರು ದಶಕಗಳಿಂದ ರಂಗಭೂಮಿ, ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿರುವ ಅವರು ಕನ್ನಡ ರಂಗಭೂಮಿಯ ಅಪರೂಪದ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.1957ರ ಜೂ.1ರಂದು ಜನಿಸಿದ ವಿರೂಪಾಕ್ಷಪ್ಪ ಕೇವಲ ಆರು ವರ್ಷದ ವಯಸ್ಸಿನಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡರು. ಬಳಿಕ ಖ್ಯಾತ ಕವಿ, ನಾಟಕಕಾರ ಪಿ.ಬಿ.ಧುತ್ತರಗಿ ಹಾಗೂ ಅವರ ಪತ್ನಿ ಸರೋಜಮ್ಮ ಧುತ್ತರಗಿ ಸ್ವಂತ ಮಗನಂತೆ ಸಾಕಿ ಸಲುಹಿ ಶಿಕ್ಷಣ ನೀಡಿದರು. ಅವರ ಆಶ್ರಯದಲ್ಲೇ ಬೆಳೆದ ವಿರೂಪಾಕ್ಷಪ್ಪ ತಮ್ಮ ಬದುಕನ್ನೆ ಧುತ್ತರಗಿ ಕುಟುಂಬದ ಕಲಾ ಪರಂಪರೆಗೆ ಅರ್ಪಿಸಿಕೊಂಡು ಹೆಮ್ಮೆಯ ವಾರಸುದಾರರಾದರು.
ಇಳಕಲ್ಲನ ವಿಜಯ ಕಲಾ ನಾಟಕ ಸಂಘದೊಂದಿಗೆ ದೀರ್ಘಕಾಲದ ಒಡನಾಟ ಹೊಂದಿರುವ ಅವರು ನಟ, ಹಾರ್ಮೋನಿಯಂ ಮಾಸ್ಟರ್, ಸಂಗೀತ ನಿರ್ದೇಶಕ ಹಾಗೂ ನಾಟಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿಯ ಬೆಳಕಿನ ಹಿಂದೆ ನಿಂತು ಅನೇಕ ಯಶಸ್ವಿ ನಾಟಕಗಳಿಗೆ ಜೀವ ತುಂಬಿದ ಎಲೆಮರೆಕಾಯಿ ಕಲಾವಿದ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಬಾಲ್ಯದಲ್ಲಿಯೇ ಪಿ.ಬಿ. ಧುರತ್ತಗಿ ಅವರ ಹರ ಗಿರಿಜೆ ಕಲ್ಯಾಣ ನಾಟಕದಲ್ಲಿ ಷಣ್ಮುಖನ ಪಾತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಅವರು ಬಳಿಕ ಗದುಗಿನಲ್ಲಿ ಎರಡು ವರ್ಷ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು. ಧಾರವಾಡದಲ್ಲಿ ಗಾನಗಂಧರ್ವ ಮಲ್ಲಿಕಾರ್ಜುನ ಮನ್ಸೂರ್ ಅವರ ಶಿಷ್ಯ ಮತ್ತಿಕಟ್ಟಿ ಪಂಚಯ್ಯ ಅವರಿಂದ ಸಂಗೀತದ ತರಬೇತಿ ಪಡೆದು ತಮ್ಮ ಸಂಗೀತದ ಬದುಕಿಗೆ ಭದ್ರ ಬುನಾದಿ ಹಾಕಿಕೊಂಡರು.
1977ರಲ್ಲಿ ಸಿಂಧೂರ ಲಕ್ಷ್ಮಣ ನಾಟಕದ ಮೂಲಕ ಹಾರ್ಮೋನಿಯಂ ಮಾಸ್ಟರ್ ಆಗಿ ಗುರುತಿಸಿಕೊಂಡ ಅವರು, ಬಸವೇಶ್ವರ, ಶಿಶುನಾಳ ಶರೀಫ, ಸಿದ್ದಾರೂಢ ಮಹಾತ್ಮ, ಅಗ್ನಿಕಮಲ, ರಕ್ತರಾತ್ರಿ, ನಾಗಲಿಂಗಲೀಲೆ, ಮಾತಂಗ ಕನ್ಯ ಸೇರಿದಂತೆ ನೂರಾರು ನಾಟಕಗಳಿಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಲ್ಲಿ ಸಂಗೀತ ಸಹಕಾರ ನೀಡಿದರು.
ನಟನಾಗಿ ಕಿತ್ತೂರ ಚನ್ನಮ್ಮ, ಇಳಕಲ್ಲ ಸೀರೆ, ಚಿಕ್ಕ ಸೊಸೆ, ಸರ್ವಮಂಗಳ ಸೇರಿದಂತೆ ಹಲವು ನಾಟಕಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಅವರು, ನಿರ್ದೇಶಕರಾಗಿ ಸಂಪತ್ತಿಗೆ ಸವಾಲ್, ಛತ್ರಪತಿ ಶಿವಾಜಿ, ತಾಯಿ ಕರುಳು, ಮಲಮಗಳು, ಸಿಂಧೂರ ಲಕ್ಷ್ಮಣ ಸೇರಿದಂತೆ ಅನೇಕ ನಾಟಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಾಗೂ ವಿಶ್ವಕನ್ನಡ ಸಮ್ಮೇಳನದಲ್ಲೂ ಅವರ ನಿರ್ದೇಶನದ ನಾಟಕಗಳು ಪ್ರದರ್ಶನಗೊಂಡಿವೆ.
ರೇಡಿಯೋ ನಾಟಕಗಳಲ್ಲಿಯೂ ತಮ್ಮ ಪ್ರತಿಭೆ ಮೆರೆದಿರುವ ವಿರೂಪಾಕ್ಷಪ್ಪಗೆ ಗದಗ ಉತ್ಸವ ಅಭಿನಂದನಾ ಸನ್ಮಾನ, ಕಲಾತಪಸ್ವಿ ಪ್ರಶಸ್ತಿ, ಸಾಂಸ್ಕೃತಿಕ ಸೌರಭ ಪ್ರಶಸ್ತಿ ಸೇರಿದಂತೆ ಹಲವು ಗೌರವ ಲಭಿಸಿವೆ. 2022-23ನೇ ಸಾಲಿನ ಪಿ.ಬಿ.ಧುತ್ತರಗಿ ಸ್ಮಾರಕ ವಾರ್ಷಿಕ ಗೌರವ ಪ್ರಶಸ್ತಿ ಕೂಡ ಸಂದಿದೆ.ಸುಮಾರು ಆರು ದಶಕಗಳಿಂದ ರಂಗಭೂಮಿ, ಸಂಗೀತ ಹಾಗೂ ನಾಟಕ ಕ್ಷೇತ್ರಕ್ಕೆ ವಿರೂಪಾಕ್ಷಪ್ಪ ಗಾಯದ ಸಲ್ಲಿಸಿರುವ ಸೇವೆ ಅನನ್ಯ. ಇಂತಹ ಹಿರಿಯ ರಂಗಸಾಧಕರಿಗೆ ಸರ್ಕಾರ ಸೂಕ್ತ ಗೌರವ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ನೀಡಬೇಕು. ರಂಗಭೂಮಿಯೇ ಅವರ ಉಸಿರು. ಪಿ.ಬಿ.ಧುತ್ತರಗಿ ನಾಟಕಗಳ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ನಿರ್ದೇಶನ ಮಾಡುವ ಅಪರೂಪದ ಪ್ರತಿಭೆ ಅವರದ್ದು ಎಂದು ನಿಸರ್ಗ ಸಂಗೀತ ಶಾಲೆ ಕಾರ್ಯದರ್ಶಿ ಶ್ರೀದೇವಿ ಎಂ.ಕೋಮಾರಿ ತಿಳಿಸಿದ್ದಾರೆ.