ಸಾರಾಂಶ
ಕನ್ನಡಪ್ರಭ ವಾರ್ತೆ ಮೂಗೂರು ಗ್ರಾಮದ ಇತಿಹಾಸ ಪ್ರಸಿದ್ಧವಾದ ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರೆ ಮಹೋತ್ಸವದ ಅಂಗವಾಗಿ ಬುಧವಾರ ಮಹಾರಥೋತ್ಸವವು ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಕೈಂಕಾರ್ಯಗಳು, ಅಭಿಷೇಕ, ಮಹಾ ಮಂಗಳಾರತಿ ನಡೆಯಿತು.ರಥೋತ್ಸವಕ್ಕೆ ವಿವಿಧ ಬಗೆಯ ಹೂವುಗಳಿಂದ ವಿಶೇಷವಾದ ಹೂವಿನ ಅಲಂಕಾರ ಮಾಡಲಾಗಿತ್ತು. ಮೂಗೂರು ಗೆಳೆಯರ ಬಳಗದ ವತಿಯಿಂದ ಅಮ್ಮನವರ ರಥೋತ್ಸವಕ್ಕೆ ಬೃಹತ್ ಗಾತ್ರದ ಹೂವಿನ ಹಾರವನ್ನು ನೀಡಿದರು.ಅಮ್ಮನವರ ಉತ್ಸವ ಮೂರ್ತಿಯನ್ನು ಅರ್ಚಕರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಮಹಾ ಮಂಗಳಾರತಿ ರಥೋತ್ಸವಕ್ಕೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್ ಚಾಲನೆ ನೀಡಿದರು.ಪ್ರಮುಖ ಬೀದಿಗಳಲ್ಲಿ ರಥೋತ್ಸವದ ಮೆರವಣಿಗೆ ನಡೆಯಿತು. ದಾರಿಯುದಕ್ಕೂ ಭಕ್ತರು ರಥೋತ್ಸವಕ್ಕೆ ಹಣ್ಣು ಜವನ ಎಸೆದು ತಮ್ಮ ಇಷ್ಟಾರ್ಥವನ್ನು ನೆರವೇರಿಸು ಎಂದು ಪ್ರಾರ್ಥಿಸಿದರು.ಭಕ್ತರು ರಥ ಎಳೆಯುವ ವೇಳೆ ಅಮ್ಮನಿಗೆ ಜೈ ತಿಬ್ಬಾದೇವಿ. ಜೈ ತ್ರಿಪುರ ಸುಂದರಿ ಅಮ್ಮ ಎಂದು ಜಯ ಘೋಷಣೆಗಳನ್ನು ದಾರಿಯುದ್ದಕ್ಕೂ ಕೂಗಿದರು. ಭಕ್ತರಿಗೆ ಪ್ರಮುಖ ರಸ್ತೆಗಳಲ್ಲಿ ಪಾನಕ ಮಜ್ಜಿಗೆ ಹಾಗೂ ಪ್ರಸಾದ ವಿನಿಯೋಗ ಏರ್ಪಡಿಸಿತ್ತು. ರಥೋತ್ಸವವು ಸಡಗರ ಸಂಭ್ರಮದಿಂದ ನೆರವೇರಿತು. ಅಮ್ಮನವರ ರಥವು ಸ್ವ ಸ್ಥಾನಕೆ ಬಂದು ಸೇರಿತು.ಮಹಾರಥೋತ್ಸವದ ಹಿನ್ನೆಲೆ ಅಮ್ಮನವರ ದೇವಾಲಯದ ದರ್ಶನಕ್ಕೆ ಭಕ್ತರು ಸರದಿ ಸಾಲಿನಲ್ಲಿ ನಿಂತು ಬೀಸಲನ್ನು ಲೆಕ್ಕಿಸದೆ ದರ್ಶನ ಪಡೆದರು.ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂಜನಗೂಡು ವಿಭಾಗ ಡಿವೈಎಸ್ಪಿ ಜಿ.ಎಸ್. ರಘು, ತಹಸೀಲ್ದಾರ್ ಸುರೇಶ್ ಅಚಾರ್, ಎಂ.ಡಿ. ಬಸವರಾಜ, ಛಾಯಾಕುಮಾರ್, ಎಂ.ಕೆ. ಸಿದ್ದರಾಜು, ನಂಜುಂಡಸ್ವಾಮಿ, ಎಂ.ಬಿ. ಸಾಗರ್ ಗೌಡರ, ನಾಗರಾಜು, ಎಂ. ಸಿದ್ದರಾಜು, ಎಂ.ಬಿ. ಕೃಷ್ಣಸ್ವಾಮಿ, ದಿಲೀಪ್, ಎಸ್ಐ ಜಗದೀಶ ದೊಳ್ ಶೆಟ್ಟಿ, ಸಿಪಿಐ ಧನಂಜಯ, ಮನೋಜ್ ಕುಮಾರ್, ನಾಗೇಂದ್ರ, ಕುಮಾರಸ್ವಾಮಿ, ಸಿದ್ದರಾಜು, ಎಲ್ಲ ಜನಾಂಗದ ಯಾಜಮಾನರು, ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.