ಲಕ್ಷ್ಮೇಶ್ವರ ಪಟ್ಟಣದಲ್ಲಿನ ಶಂಖ ಬಸದಿಯಲ್ಲಿ ಹಲವು ಶಾಸನಗಳು ಸಿಕ್ಕಿರುವುದು ಪುಲಿಗೆರೆಗೆ ತನ್ನದೆ ಐತಿಹಾಸಿಕ ಮಹತ್ವ ನೀಡಿದೆ ಎಂಬುದಕ್ಕೆ ಸಾಕ್ಷಿಗಳಾಗಿವೆ.

ಲಕ್ಷ್ಮೇಶ್ವರ: ಪುಲಿಗೆರೆಯು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಮಹತ್ತದ ಸ್ಥಾನವನ್ನು ಪಡೆದಿದೆ. ಪುಲಿಗೆರೆ 300 ಎಂದು ಬಾದಾಮಿ ಚಾಲುಕ್ಯರ ಕಾಲದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿತ್ತು ಎನ್ನುವುದು ಇತಿಹಾಸದಿಂದ ತಿಳಿಯುತ್ತದೆ ಎಂದು ಡಾ. ಮನು ಬಳಿಗಾರ ತಿಳಿಸಿದರು.

ಬುಧವಾರ ಪಟ್ಟಣದ ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ, ಮೈಸೂರಿನ ಮಾನಸ ಗಂಗೋತ್ರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಆಶ್ರಯದಲ್ಲಿ 3 ದಿನಗಳ ಕಾಲ ನಡೆಯುವ ಪುಲಿಗೆರೆ ಪರಿಸರದ ಪ್ರಾಚೀನ ಕನ್ನಡ ಸಾಹಿತ್ಯ ಎಂಬ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಲಕ್ಷ್ಮೇಶ್ವರ ಪಟ್ಟಣದಲ್ಲಿನ ಶಂಖ ಬಸದಿಯಲ್ಲಿ ಹಲವು ಶಾಸನಗಳು ಸಿಕ್ಕಿರುವುದು ಪುಲಿಗೆರೆಗೆ ತನ್ನದೆ ಐತಿಹಾಸಿಕ ಮಹತ್ವ ನೀಡಿದೆ ಎಂಬುದಕ್ಕೆ ಸಾಕ್ಷಿಗಳಾಗಿವೆ. ಪುಲಿಗೆರೆ ಪ್ರಾಂತವು ಕನ್ನಡ ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆ ನೀಡಿದೆ. ಪುಲಿಗೆರೆಯ ತಿರುಳ್ಗನ್ನಡ ನಾಡು ಎಂದು ಪ್ರಸಿದ್ಧಿ ಪಡೆದಿದೆ. ಪರಿಶುದ್ಧ ಕನ್ನಡ ಭಾಷೆ ಪುಲಿಗೆರೆಯದ್ದು ಎಂಬ ಹೆಗ್ಗಳಿಕೆಗೆ ಲಕ್ಷ್ಮೇಶ್ವರ ಪರಿಸರದ್ದಾಗಿದೆ. ಬಿ.ಎಲ್. ರೈಸ್ ಎಂಬ ಆಂಗ್ಲ ಭಾಷಾ ಪಂಡಿತನು ನಮ್ಮ ಪುಲಿಗೆರೆಯ ಪರಿಸರಕ್ಕೆ ತನ್ನದೇ ಆದ ಸಾಹಿತ್ಯಿಕ ಕೊಡುಗೆ ನೀಡಿದ ಮಹಾಕವಿ ಪಂಪನನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಹೊಂದಿದ್ದಾರೆ ಎಂದರು.

ಪಂಪನ ಸಾಹಿತ್ಯವು ಶ್ರೇಷ್ಠ ಕಾವ್ಯವಾಗಿದೆ. ಸಮಾಜದಲ್ಲಿನ ಜಾತಿಯತೆ ಹೋಗಲಾಡಿಸುವ ಮುದ್ದು ಕವಿರಾಜ ಮಾರ್ಗದಲ್ಲಿ ಉಲ್ಲೇಖಿತವಾಗಿದೆ. ಸಂಸ್ಕೃತ ಅಧ್ಯಯನಕ್ಕೆ ಘಟಿಕಾ ಸ್ಥಾನವನ್ನು ಲಕ್ಷ್ಮೇಶ್ವರ ಹೊಂದಿತ್ತು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಲಕ್ಷ್ಮೇಶ್ವರ ದೇವಾಲಯ. ಬಸದಿಗಳು, ಚೈತಾಲಯಗಳು, ವಿಷ್ಣು ದೇವಾಲಯಗಳು ಕನ್ನಡ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿವೆ. ಲಕ್ಷ್ಮೇಶ್ವರ ಪರಿಸರವು ಕನ್ನಡ ಸಾಹಿತ್ಯದ ಮಹತ್ವವನ್ನು ಉಳಿಸುವ ಹಾಗೂ ಬೆಳೆಸುವ ಕಾರ್ಯ ಮಾಡಬೇಕು. ದೇಶದಲ್ಲಿ ಎಲ್ಲಿಯೂ ಇರದ ಸೋಮೇಶ್ವರ ಮೂರ್ತಿ ಇರುವುದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಆಂಗ್ಲ ಭಾಷೆಯ ಹುಟ್ಟಿರದ ವೇಳೆ ಕನ್ನಡ ಸಾಹಿತ್ಯವು ಉತ್ತುಂಗ ಸ್ಥಾನದಲ್ಲಿ ಇತ್ತು ಎಂಬುದು ಹೆಮ್ಮೆಯ ಸಂಗತಿ. ಜೈನ ಸಾಹಿತ್ಯಕ್ಕೆ ಲಕ್ಷ್ಮೇಶ್ವರ ಪರಿಸರವು ಅಪಾರ ಕೊಡುಗೆ ನೀಡಿದೆ ಎಂದು ಹೇಳಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡ ಭಾಷೆಯ ಬೆಳವಣಿಗೆಗೆ ಮಾರಕವಾಗಿದ್ದು, ಈ ಕುರಿತು ನಾವೆಲ್ಲರೂ ಚಿಂತನೆ ನಡೆಸಬೇಕಾಗಿದೆ. 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರೆಯುವುದರಿಂದ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದರು.

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನದ ಯೋಜನಾ ನಿರ್ದೇಶಕ ಡಾ. ಎನ್.ಎಂ. ತಳವಾರ ಪುಲಿಗೆರೆ ಪರಿಸರವು ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳ ಕುರಿತು ಪ್ರಾಸ್ಥಾವಿಕವಾಗಿ ಮಾತನಾಡಿದರು.ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ರಾಮಣ್ಣ ಲಮಾಣಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ಪ್ರೊ. ಶಿವಪ್ರಕಾಶ್ ಶಿಗ್ಲಿ, ಪ್ರೊ. ಎನ್.ಆರ್. ಪಾಟೀಲ, ಪ್ರೊ. ಆರ್.ಬಿ. ಬನ್ನೂರ, ಸಿ.ಜಿ. ಹಿರೇಮಠ, ಲಲಿತಾ ಕೆರಿಮನಿ ಸೇರಿದಂತೆ ಅನೇಕರು ವಿದ್ವಾಂಸರು ಇದ್ದರು. ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ಸಂಶೋಧಕಿ ಡಾ. ಎನ್.ಎಸ್. ಅನ್ನಪೂರ್ಣ ನಿರೂಪಿಸಿದರು. ವಕೀಲ ಬಸವರಾಜ ಬಾಳೆಶ್ವರಮಠ ವಂದಿಸಿದರು.