ಪುತ್ತೂರು: ರ‍್ಯಾಗಿಂಗ್ ಮತ್ತು ಮಾದಕ ದ್ರವ್ಯ ಮುಕ್ತ ಜೀವನ ಕಾರ್ಯಾಗಾರ

| Published : Sep 17 2025, 01:08 AM IST

ಪುತ್ತೂರು: ರ‍್ಯಾಗಿಂಗ್ ಮತ್ತು ಮಾದಕ ದ್ರವ್ಯ ಮುಕ್ತ ಜೀವನ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಜಿ ಆಶ್ರಯದ ವಿದ್ಯಾರ್ಥಿಗಳ ಪುನಶ್ಚೇತನಾ ಕಾರ್ಯಕ್ರಮದಲ್ಲಿ ‘ರ‍್ಯಾಗಿಂಗ್ ಮತ್ತು ಮಾದಕ ದ್ರವ್ಯ ಮುಕ್ತ ಜೀವನ’ ಕುರಿತು ಉಪನ್ಯಾಸ ನೆರವೇರಿತು.

ಪುತ್ತೂರು: ಮೋಜಿಗಾಗಿ ಪ್ರಾರಂಭವಾಗುವ ಮಾದಕ ದ್ರವ್ಯ ಸೇವನೆಯು ಮುಂದೆ ಬಿಟ್ಟಿರಲಾರದ ಚಟವಾಗಿ ಪರಿಣಮಿಸುತ್ತದೆ ಮತ್ತು ಇದು ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿದರೆ ಏನೂ ತೊಂದರೆಯಾಗದು. ಯಾವುದೇ ರೀತಿಯ ತೊಂದರೆ ಅಥವಾ ಕಿರುಕುಳಗಳು ಸಂಭವಿಸಿದರೆ ತಕ್ಷಣ ಪೋಲೀಸರಿಗೆ ಮಾಹಿತಿ ನೀಡಬೇಕು ಎಂದು ಪುತ್ತೂರು ನಗರ ಪೋಲಿಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಹೇಳಿದ್ದಾರೆ.ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ, ಆ್ಯಂಟಿ ರ‍್ಯಾಗಿಂಗ್ ಸೆಲ್ ಮತ್ತು ಆ್ಯಂಟಿ ಡ್ರಗ್ ಸೆಲ್ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪುನಶ್ಚೇತನಾ ಕಾರ್ಯಕ್ರಮದಲ್ಲಿ ‘ರ‍್ಯಾಗಿಂಗ್ ಮತ್ತು ಮಾದಕ ದ್ರವ್ಯ ಮುಕ್ತ ಜೀವನ’ ಕುರಿತು ಅವರು ಮಾತನಾಡಿದರು.ದ್ವಿಚಕ್ರ ವಾಹನ ಚಲಾಯಿಸುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕು ಮತ್ತು ತಮ್ಮ ಹಾಗೂ ಇತರ ವಾಹನ ಸವಾರರ ಸುರಕ್ಷತೆಯೂ ನಮ್ಮ ಆದ್ಯ ಕರ್ತವ್ಯವಾಗಬೇಕು. ವಿದ್ಯಾರ್ಥಿಗಳು ಸನ್ನಡತೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ರಾಯಭಾರಿಗಳಾಗಬೇಕು ಎಂದು ಹೇಳಿದ ಅವರು ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆ, ರ‍್ಯಾಗಿಂಗ್, ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದರು.

ಮೂಲವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ಸ್ವಾಗತಿಸಿದರು. ಆ್ಯಂಟಿ ಡ್ರಗ್ ಸೆಲ್‌ನ ಸಂಯೋಜಕ ಪ್ರೊ.ಗೈಟನ್ ಲೋಬೋ ವಂದಿಸಿದರು. ಆ್ಯಂಟಿ ರ‍್ಯಾಗಿಂಗ್ ಸೆಲ್ ಸಂಯೋಜಕ ಪ್ರೊ.ನವೀನ್.ಎಸ್.ಪಿ ಪ್ರಸ್ತಾವಿಕ ಮಾತುಗಳನ್ನಾಡಿದರು. . ಡಾ. ಶ್ವೇತಾಂಬಿಕಾ ನಿರ್ವಹಿಸಿದರು.