ಗೇರು ಕೃಷಿ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಗೇರು ಮೇಳ ಹಾಗೂ ಕಾರ್ಯಾಗಾರ ಕಾರ್ಯಕ್ರಮ ಮೇ 17 ಮತ್ತು 18ರಂದು ಮಂಗಳೂರು ಕದ್ರಿ ಉದ್ಯಾವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ತಿಳಿಸಿದರು.

ಮಂಗಳೂರು: ಗೇರು ಕೃಷಿ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಗೇರು ಮೇಳ ಹಾಗೂ ಕಾರ್ಯಾಗಾರ ಕಾರ್ಯಕ್ರಮ ಮೇ 17 ಮತ್ತು 18ರಂದು ಮಂಗಳೂರು ಕದ್ರಿ ಉದ್ಯಾವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ತಿಳಿಸಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 17ರಂದು ಬೆಳಗ್ಗೆ 11ಕ್ಕೆ ಅರಣ್ಯ ಸಚಿವ ಈಶ್ವರ್‌ ಬಿ.ಖಂಡ್ರೆ ಉದ್ಘಾಟಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸುವರು. ವಿಧಾನ ಸಭೆ ಸ್ಪೀಕರ್‌ ಯು.ಟಿ.ಖಾದರ್‌, ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು ಎಂದರು.

17ರಂದು ಬೆಳಗ್ಗೆ 9ರಿಂದ 10.30ರ ವರೆಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾಗಿ ಗೇರು ಮತ್ತು ಪರಿಸರ ಜಾಗೃತಿಯ ಭಾಷಣ, ಚಿತ್ರಕಲೆ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ನಿಗಮದ ವ್ಯಾಪ್ತಿಯ ಗೇರು ಬೆಳೆ ಸಾಧಕರಿಗೆ ಸನ್ಮಾನ, ಮೇ 17ರಂದು ಸಂಜೆ 7ಕ್ಕೆ ದೇವದಾಸ್‌ ಕಾಪಿಕಾಡ್‌ ತಂಡದವರಿಂದ ನಮಸ್ಕಾರ ಮಾಸ್ಟ್ರೇ ನಾಟಕ, ಇಂಚರ ಮೆಲೋಡಿಸ್‌ ತಂಡದಿಂದ ಮೇ 18ರಂದು 2 ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾರ್ವನಿಕರಿಗೆ ಗೇರು ಹಣ್ಣಿನ ಜ್ಯೂಸ್‌ ಮತ್ತು ‘ಮನೆಗೊಂದು ಗೇರು’ ಕಾರ್ಯಕ್ರಮದ ಅಂಗವಾಗಿ ಉಚಿತ ಗೇರು ಗಿಡ ವಿತರಿಸಲಾಗುವುದು. 70 ಸ್ಟಾಲ್‌ಗಳನ್ನು ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ತಾಂತ್ರಿಕ ಕಾರ್ಯಾಗಾರ:

17ರಂದು ಕಾರ್ಯಾಗಾರದಲ್ಲಿ ಪುತ್ತೂರು ಐಸಿಎಆರ್‌-ಡಿಸಿಆರ್‌ ನಿರ್ದೇಶಕ ಮತ್ತು ಪ್ರಧಾನಿ ವಿಜ್ಞಾನಿ ಡಾ.ಜೆ.ದಿನಕರ ‘ಗೇರು ಬೇಸಾಯದಲ್ಲಿ ಆಧುನಿಕ ತಂತ್ರಜ್ಞಾನಗಳು’, ಐಸಿಎಆರ್‌-ಡಿಸಿಆರ್‌ ಹಿರಿಯ ವಿಜ್ಞಾನಿ ಡಾ.ವೀಣಾ ಜಿ.ಎಲ್‌.ಗೌಡ ‘ಗೇರು ಹಣ್ಣಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ’, ಪ್ರಗತಿಪರ ಕೃಷಿಕ ಕಡಬಮಜಲು ಸುಭಾಷ್‌ ರೈ ‘ಗೇರು ಕೃಷಿಯ ಬಗ್ಗೆ ಸ್ವ ಅನುಭವ’, ಕೃಷಿಕ ವಿಶ್ವಕೇಶವ ‘ಗೋಡಂಬಿ ಹಾಗೂ ಗೇರು ಸಂಸ್ಕರಣೆಯ ಕಡೆಗೆ ನನ್ನ ಪಯಣ’ 18ರಂದು ಕಲ್ಭಾವಿ ಕನ್ಸ್ಯೂಮರ್‌ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ವವ್ವಸ್ಥಾಪಕ ನಿರ್ದೇಶಕ ಪ್ರಕಾಶ್‌ ಕಲ್ಬಾವಿ ‘ಗೋಡಂಬಿ ಕೃಷಿ ಆತ್ಮ ನಿರ್ಭರ್‌-2035’, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಮಾಜಿ ನಿರ್ದೇಶಕ ಡಾ.ವೆಂಕಟೇಶ್‌ ಎನ್‌.ಹುಬ್ಬಳ್ಳಿ ‘ಭಾರತೀಯ ಗೋಡಂಬಿ ವಲಯ’, ಕ್ಯಾಶ್ಯೂ ಟೆಕ್ನೋಲಜಿ ಕೇಂದ್ರ ಶಿವಮೊಗ್ಗದ ಕೋ-ಆರ್ಡಿನೇಟರ್‌ ಡಾ.ಸಿ.ಸುನಿಲ್‌ ‘ಗೋಡಂಬಿ ಬೆಳೆಗೆ ಶಿವಮೊಗ್ಗ ವಿಶ್ವವಿದ್ಯಾಲಯದ ಕೊಡುಗೆಗಳು’, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಉಪನಿರ್ದೇಶಕ ದಾದಾ ಸಾಹೇಬ್‌ ದೇಸಾಯಿ ‘ಗೋಡಂಬಿ ಬೆಳೆಯ ಬಗ್ಗೆ ಭಾರತ ಸರ್ಕಾರದ ಉಪಕ್ರಮಗಳು, ಯೋಜನೆಗಳು, ಸರ್ನರಿಗಳ ಮಾನ್ಯತೆ’ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.