ಕುಶಾಲನಗರ ಗುಮ್ಮನ ಕೊಲ್ಲಿ ಬಳಿ 11ರಂದು ವಿದ್ಯುತ್ ತಂತಿ ತಗುಲಿ ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಸಾನ್ವಿ ಚಿಕಿತ್ಸೆ ವೆಚ್ಚವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಭರಿಸಲು ಕ್ರಮ ಕೈಗೊಳ್ಳುವುದು ಎಂದು ಚೆಸ್ಕಾಂ ಕೊಡಗು ವೃತ್ತದ ಸೂಪರಿಂಟೆಂಡೆಂಟ್ ಇಂಜಿನಿಯರ್ ಎಂ ಕೆ ಸೋಮಶೇಖರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭವಾರ್ತೆ ಕುಶಾಲನಗರ ಕುಶಾಲನಗರ ಗುಮ್ಮನ ಕೊಲ್ಲಿ ಬಳಿ 11ರಂದು ವಿದ್ಯುತ್ ತಂತಿ ತಗುಲಿ ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಸಾನ್ವಿ ಚಿಕಿತ್ಸೆ ವೆಚ್ಚವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಭರಿಸಲು ಕ್ರಮ ಕೈಗೊಳ್ಳುವುದು ಎಂದು ಚೆಸ್ಕಾಂ ಕೊಡಗು ವೃತ್ತದ ಸೂಪರಿಂಟೆಂಡೆಂಟ್ ಇಂಜಿನಿಯರ್ ಎಂ ಕೆ ಸೋಮಶೇಖರ್ ಭರವಸೆ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಿಂದ ಮೈಸೂರಿನ ಕಚೇರಿಯಲ್ಲಿ ಭೇಟಿ ಮಾಡಿದ ಕುಶಾಲನಗರ ತಾಲೂಕು ಸೌಂದರ್ಯ ವರ್ಧಕ ತಜ್ಞರ ಅಸೋಸಿಯೇಷನ್ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿ, ಆಕಸ್ಮಿಕ ಘಟನೆ ನಡೆದಿದೆ. ಬಾಲಕಿಗೆ ಚಿಕಿತ್ಸೆ ನಡೆಯುತ್ತಿದ್ದು ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದ್ದು ಆಕೆಯ ಚಿಕಿತ್ಸೆಗೆ ತಗಲುವ ವೆಚ್ಚವನ್ನು ನಿಗಮ ಭರಿಸಲಿದೆ ಎಂದು ಹೇಳಿದರು. ಘಟನೆಯ ಬಗ್ಗೆ ಈಗಾಗಲೇ ಚೆಸ್ಕಾಂ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಈ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿ ಚಿಕಿತ್ಸೆಗೆ ತುರ್ತಾಗಿ 50 ಸಾವಿರ ನೀಡಿರುವುದಾಗಿ ತಿಳಿಸಿದ್ದಾರೆ. ಹೆಚ್ಚುವರಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಟ್ಟಡದ ಸಮೀಪ 11 ಕೆ ವಿ ವಿದ್ಯುತ್ ತಂತಿ ತಗಲಿದ ಘಟನೆ ಬಗ್ಗೆ ಇಲಾಖೆ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಘಟನೆಯ ಸಮಗ್ರ ವರದಿಯನ್ನು ತಕ್ಷಣ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ನಿಗಮದ ಅಧಿಕಾರಿಗಳು ಈಗಾಗಲೇ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದ್ದು ಉತ್ತಮ ಚಿಕಿತ್ಸೆ ನೀಡುವಂತೆ ಕೋರಲಾಗಿದೆ ಎಂದು ಅವರು ಹೇಳಿದರು. ಕಟ್ಟಡಗಳ ಸಮೀಪ ತಂತಿಗಳು, ಕ್ರಮ: ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಟ್ಟಡಗಳ ಸಮೀಪ ಹಾದು ಹೋಗಿರುವ ವಿದ್ಯುತ್ ತಂತಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡಿ ಅಗತ್ಯ ಇಲಾಖಾ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಸೋಮಶೇಖರ್ ತಿಳಿಸಿದ್ದಾರೆ.

ಸಂಘಟನೆಗಳ ನೆರವು: ವಿದ್ಯುತ್ ತಗುಲಿ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಸಾನಿಯಾ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸೌಂದರ್ಯ ತಜ್ಜರ ಅಸೋಸಿಯೇಷನ್ ಜಿಲ್ಲಾ ಸ್ಥಾಪಕ ಅಧ್ಯಕ್ಷರಾದ ವನಿತಾ ಚಂದ್ರಮೋಹನ್, ತಾಲೂಕು ಅಧ್ಯಕ್ಷರಾದ ನಾಗಮಣಿ, ಪ್ರಧಾನ ಕಾರ್ಯದರ್ಶಿ ನವ್ಯ, ತಾಜ್ ಇಸ್ಮಾಯಿಲ್ ಮೈಸೂರಿನ ಆಸ್ಪತ್ರೆಗೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿ ತುರ್ತು ಚಿಕಿತ್ಸೆ ವೆಚ್ಚಕ್ಕೆ ಕುಶಾಲನಗರ ತಾಲೂಕು ಸಂಘದಿಂದ 5 ಸಾವಿರ ರು. ಮತ್ತು ಸದಸ್ಯರ ಮೂಲಕ 30 ಸಾವಿರ ರು., ಜಿಲ್ಲಾ ಸೌಂದರ್ಯವರ್ಧಕ ಸಂಘದ ಸಂಘದ ಮೂಲಕ 29 ಸಾವಿರ ರು. ಹಾಗೂ ಸಂಘದ ಕೋರಿಕೆ ಮೇರೆಗೆ ಬಿ ಎಂ ಐ ಸಂಸ್ಥೆ ಸುಮಾರು 50 ಸಾವಿರ ರೂಪಾಯಿ ಸೇರಿದಂತೆ ಸುಮಾರು 1.5 ಲಕ್ಷ ರು. ಗಳ ಸಹಾಯಹಸ್ತ ಈಗಾಗಲೇ ನೀಡಲಾಗಿದೆ ಎಂದು ಅಸೋಸಿಯೇಷನ್ ಪ್ರಮುಖರು ತಿಳಿಸಿದ್ದಾರೆ.