ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ತಾಲೂಕಿನ ಎನ್.ಜಿ.ಹಳ್ಳಿ ಗ್ರಾಮದಲ್ಲಿ 10 ಕೋಟಿ ರು. ವೆಚ್ಚದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ, ನಂತರ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರಾಥಮಿಕ ಶಾಲೆಗೆ ಬಸ್ ವಿತರಿಸಿ ಮಾತನಾಡಿದರು.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುವುದು. ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಶೂ, ಸಾಕ್ಸ್, ಪೌಷ್ಠಿಕಾಂಶವುಳ್ಳ ಕಾಳುಗಳನ್ನು ನೀಡಲಾಗುವುದು. ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಹಳ್ಳಿಗಳ ಮಕ್ಕಳು ಇಲ್ಲಿಗೆ ಬಂದು ಪಾಠ ಕಲಿಯಬಹುದು. ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಉಚಿತವಾಗಿ ಬಸ್‍ಗಳನ್ನು ಬಿಟ್ಟಿದ್ದೇನೆ. ಡ್ರೈವರ್ ಕಂಡಕ್ಟರ್‌ಗಳಿಗೆ ಸಂಬಳ ನೀಡಿ ಬಸ್‍ಗೆ ಡೀಸೆಲ್ ಕೂಡ ಹಾಕಿಸಲಾಗುವುದು. ಬೆಳಗ್ಗೆ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆ ತಂದು ಸಂಜೆ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುವುದು ಎಂದರು.ರಾಜ್ಯದಲ್ಲಿ ಯಾವ ಶಾಸಕರು ಇಂತಹ ಪುಣ್ಯದ ಕೆಲಸ ಮಾಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಹಳೆಯ ಶಾಲೆಗಳನ್ನು ಕೆಡವಿ 10 ಕೋಟಿ ರು. ವೆಚ್ಚದಲ್ಲಿ ಉತ್ತಮ ಕಟ್ಟಡಗಳನ್ನು ಕಟ್ಟಿಸಿ ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗುವುದು. ಪೋಷಕರುಗಳು ತಮ್ಮ ಮಕ್ಕಳನ್ನು ಕರ್ನಾಟಕ ಪಬ್ಲಿಕ್ ಶಾಲೆಗೆ ದಾಖಲಿಸಬೇಕು.
ದೇವಸ್ಥಾನಕ್ಕೆ ಈಗಾಗಲೆ ಹತ್ತು ಲಕ್ಷ ರೂ.ಗಳನ್ನು ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಅನುದಾನದಲ್ಲಿ ಇನ್ನು ಹಣ ಕೊಡುತ್ತೇನೆ. ಎನ್.ಜಿ.ಹಳ್ಳಿ ಗೇಟ್‍ನಲ್ಲಿ ಪೊಲೀಸ್ ಉಪ ಠಾಣೆ ಅಗತ್ಯವಿರುವುದರಿಂದ ಗೃಹ ಮಂತ್ರಿ ಬಳಿ ಮಾತನಾಡಿ ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಎನ್.ಜಿ.ಹಳ್ಳಿ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿಸುವಂತೆ ಈ ಹಿಂದೆ ಶಾಸಕ ಡಾ.ಎಂ.ಚಂದ್ರಪ್ಪನವರಲ್ಲಿ ಮನವಿ ಮಾಡಿದ್ದೆ. ಅದರಂತೆ ಅವರು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಕೊಟ್ಟು ಹೇಳಿದ ಮಾತಿನಂತೆ ನಡೆದುಕೊಂಡಿದ್ದಾರೆ. 5 ರಿಂದ 10 ಕೋಟಿ ರು. ವೆಚ್ಚದಲ್ಲಿ ಹೊಸಕಟ್ಟಡ ಕಟ್ಟಿಸುವುದಾಗಿಯೂ ಭರವಸೆ ಕೊಟ್ಟಿರುವುದು ನನಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಕೆಲವು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿವೆ. ಎನ್.ಜಿ.ಹಳ್ಳಿ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮದ ಮಕ್ಕಳು ಇಲ್ಲಿಗೆ ಬಂದು ಶಿಕ್ಷಣ ಪಡೆಯಬೇಕು.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಾದ ಹೆಚ್ಚುವರಿ ಕೊಠಡಿ, ಗ್ರಂಥಾಲಯ, ಲೈಬ್ರರಿಯನ್ನು ತೆರೆಯಬೇಕು. ಶಿಕ್ಷಕರು ಮನೆ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆ ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಮಕ್ಕಳನ್ನು ಗ್ರಾಮಸ್ಥರು ಇಲ್ಲಿಗೆ ದಾಖಲಿಸಿ ಸಹಕರಿಸಬೇಕು.ಎನ್.ಜಿ.ಹಳ್ಳಿ ಗಡಿ ಭಾಗದಲ್ಲಿರುವುದರಿಂದ ಇಲ್ಲೊಂದು ಪೊಲೀಸ್ ಔಟ್‍ಪೋಸ್ಟ್ ಮಂಜೂರು ಮಾಡಿಸುವಂತೆ ಶಾಸಕ ಡಾ.ಎಂ.ಚಂದ್ರಪ್ಪನವರಲ್ಲಿ ಕೆ.ಎಸ್.ನವೀನ್ ವಿನಂತಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರನಾಥ್, ಹೊಳಲ್ಕೆರೆ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಲೋಕೇಶ್, ಜೆ.ಆರ್.ಗುರುಮೂರ್ತಿ ಕುಮಾರ್, ಮೋಹನ್‍ಕುಮಾರ್, ಶ್ರೀನಿವಾಸ್ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.