--ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ₹30 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶುಕ್ರವಾರ ಚಾಲನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗುಣಮಟ್ಟದ ಕಾಮಗಾರಿ ಮಾಡಬೇಕು. ಉಸ್ತುವಾರಿ ಎಂಜಿನಿಯರ್ ಸ್ಥಳದಲ್ಲೇ ಇದ್ದು ನೋಡಿಕೊಳ್ಳಬೇಕು. ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ. ಲೋಪ ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.

ಲಕ್ಯಾ ಹೋಬಳಿ ಬಿಳೇಕಲ್ಲಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ₹30 ಲಕ್ಷ ರು. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಪಕ್ಷದ ಕಾರ್ಯಕರ್ತರು ಚುನಾವಣೆ ಬಂದಾಗ ಅವರವರ ಪಕ್ಷದಲ್ಲಿ ಗಟ್ಟಿಯಾಗಿ ನಿಲ್ಲಲಿ. ಕಾಮಗಾರಿ ನಡೆಯುವಾಗ ಸರಿ ಇಲ್ಲ ಅಂದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಸರ್ಕಾರಿ ₹57 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ನೀಡಿದೆ. ಬಹಳ ಕಷ್ಟದ ಇಂತಹ ಸಂದರ್ಭದಲ್ಲಿ ಗುತ್ತಿಗೆದಾರರು, ಎಂಜಿನಿಯರ್ ಸ್ಥಳದಲ್ಲಿ ನಿಂತು ಕಾಮಗಾರಿ ಮಾಡಿಸಿದರೆ ಜನರು ಏಕೆ ಕೇಳಲು ಬರುತ್ತಾರೆ. ಕಾಮಗಾರಿ ಸರಿ ಇಲ್ಲ ಎಂದರೆ ಜನ ಕೇಳುತ್ತಾರೆ. ಸರ್ಕಾರ ಜಾರಿ ತಂದಿರುವ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.


ಶಾಸಕರಾದ ಬಳಿಕ ಬಿಳೇಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ₹1.88 ಕೋಟಿ ಮಂಜೂರು ಮಾಡಲಾಗಿದೆ. 2023-24ನೇ ಸಾಲಿನ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಉದ್ದೆಬೋರನಹಳ್ಳಿ ಕೆಂಚರಾಯ ದೇವಸ್ಥಾನಕ್ಕೆ ₹5 ಲಕ್ಷ ಉದ್ದೆಬೋರನ ಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆಗೆ ₹20 ಲಕ್ಷ ತಡಬೇನಹಳ್ಳಿಗೆ ₹10 ಲಕ್ಷ, ಪಾದಮನೆಗೆ ₹20 ಲಕ್ಷ, . ಹೊಸಹಳ್ಳಿಗೆ ₹7 ಲಕ್ಷ ಸರ್ಪನಳ್ಳಿ, ಗುಂಗರಹಳ್ಳಿಗೆ ₹18 ಲಕ್ಷ, ರಂಗನಾಥಸ್ವಾಮಿ ದೇವಾಲಯದ ಮುಂದುವರೆದ ಕಾಮಗಾರಿಗೆ ಈಗ ₹10 ಲಕ್ಷ ಮೀಸಲಿಡಲಾಗಿದೆ. ಉದ್ದೆಬೋರನಹಳ್ಳಿಯ ಸಾರ್ವಜನಿಕ ಸಮುದಾಯ ಭವನದ ಅಭಿವೃದ್ಧಿಗೆ ₹10 ಲಕ್ಷ ನೀಡಲಾಗಿದೆ ಎಂದರು.

2025-26 ನೇ ಸಾಲಿನಲ್ಲಿ ₹30 ಲಕ್ಷ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಅಂಬೇಡ್ಕರ್ ಸಮುದಾಯ ಭವನಕ್ಕೆ ₹10 ಲಕ್ಷ ಸಿದ್ಧರಾಮೇಶ್ವರ ದೇವಾಲಯಕ್ಕೆ ₹5 ಲಕ್ಷ ಹೀಗೆ ಒಟ್ಟು ₹1.88 ಕೋಟಿ ನೀಡಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಡವರ ಬದುಕನ್ನು ಸಮಾಜವನ್ನು ನಿರ್ಮಾಣ ಮಾಡಲು 5 ಭಾಗ್ಯಗಳನ್ನು ಕೊಟ್ಟಿದ್ದಾರೆ. ಅಭಿವೃದ್ಧಿ ಕಡೆ ನಮ್ಮ ಸರ್ಕಾರ ಗಮನಹರಿಸಿದೆ. ನಾವು ಯಾವುದೇ ಗ್ರಾಮ ಪಂಚಾಯ್ತಿಗೆ ಹೋದರೂ ಒಂದು ರಸ್ತೆಯನಾದರೂ ಮಾಡಿದ್ದೇವೆ. ತಮ್ಮ ಊರಿನಲ್ಲಿ ಒಂದು ದೇವಸ್ಥಾನಕ್ಕೂ ಹಣ ನೀಡಿಲ್ಲ ಎಂದು ಯಾರೂ ಹೇಳುವುದಿಲ್ಲ ಎಂದರು.

ಕಾಂಕ್ರೀಟ್ ರಸ್ತೆಯನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಆದರೆ, ಡಾಂಬರ್ ರಸ್ತೆಯನ್ನು ಗುತ್ತಿಗೆದಾರರು ಕಳೆದ 20 ದಿನಗಳಿಂದ ಮಾಡುತ್ತಿಲ್ಲ, ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವುದಿಂದ ಡಾಂಬರ್ ಸಿಗುತ್ತಿಲ್ಲ, ಕಾಮಗಾರಿಯ ಕಾರ್ಯಾದೇಶ ನೀಡಿದರೂ ಕೂಡ ಕಾಮಗಾರಿ ನಡೆಯುತ್ತಿಲ್ಲ. ಡಿಸೆಂಬರ್ ಒಳಗೆ ಡಾಂಬರೀಕರಣ ಕಾಮಗಾರಿ ಮುಗಿಸಲಾಗುವುದು ಎಂದು ತಿಳಿಸಿದರು.3 ಟವರ್‌ ಅಷ್ಟೇ ಬಾಕಿ

ಕಣಿವೆಹಳ್ಳಿ ವಿದ್ಯುತ್ ಸಮಸ್ಯೆ ನಿರ್ವಣೆಗಾಗಿ ಕಣಿವೆಹಳ್ಳಿ ಸೇರಿದಂತೆ ಈ ಭಾಗದ ಜನರು ಸಬ್ ಸ್ಟೇಷನ್ ಕೇಳಿದ್ದರು ಹಾಗಾಗಿ ಗಾಣದಾಳು ಗ್ರಾಮದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ನೇತೃತ್ವದಲ್ಲಿ 16.50 ಕೋಟಿ ವೆಚ್ಚದಲ್ಲಿ ಗುದ್ದಲಿ ಪೂಜೆ ಮಾಡಲಾಗಿತ್ತು. ಈಗಾಗಲೇ ಕಾಮಗಾರಿ ಮುಗಿದು ಸ್ಟೇಷನ್ ಚಾರ್ಜ್ ಮಾಡಬೇಕಾಗಿತ್ತು, ಆದರೆ, ಟವರ್ ತರುವ ಸಂದರ್ಭದಲ್ಲಿ ರೈತರು ಗೊಂದಲ ಉಂಟು ಮಾಡಿದ್ದರಿಂದ ಅವರಿಗೆ ಪರಿಹಾರ ಕೊಟ್ಟು ಈಗಾಗಲೇ 6 ಟವರ್ ಮಾಡಿದ್ದಾರೆ ಇನ್ನು 3 ಟವರ್ ಮಾತ್ರ ಬಾಕಿ ಇದೆ.

ಆ ಮೂರು ಟವರ್ ಗಳ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮನವೊಲಿಸಿ ಕಾಮಗಾರಿ ಮುಗಿಸಬೇಕೆಂದು ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ. ಬೇಸಿಗೆಯಲ್ಲಿ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಗೋಪಿಕೃಷ್ಣ, ಮಾಜಿ ಸದಸ್ಯ ಪುಟ್ಟೇಗೌಡ, ಪಾಂಡುರಂಗಪ್ಪ, ರಾಮಚಂದ್ರ ಉಪಸ್ಥಿತರಿದ್ದರು.----ಫೋಟೋ----ಲಕ್ಯಾ ಹೋಬಳಿ ಬಿಳೇಕಲ್ಲಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಎಚ್.ಡಿ. ತಮ್ಮಯ್ಯ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.