ಸಾರಾಂಶ
ಗಂಗಾವತಿ: ತಾಲೂಕಿನ ಹೇಮಗುಡ್ಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅದೇ ಹಾಸ್ಟೆಲ್‌ನ ಕಿರಿಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿ ರ್‍ಯಾಗಿಂಗ್ ಮಾಡಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಐವರು ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಹೇಮಗುಡ್ಡ ಮೊರಾರ್ಜಿ ವಸತಿ ಶಾಲೆಯಲ್ಲಿ ಒಟ್ಟು 245 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಐವರು ವಿದ್ಯಾರ್ಥಿಗಳು, ಕಿರಿಯ (6,7,8,9 ನೇ ತರಗತಿ) ವಿದ್ಯಾರ್ಥಿಗಳ ಮೇಲೆ ರ್‍ಯಾಗಿಂಗ್ ಮಾಡಿದ್ದಾರೆ. ಹತ್ತನೆ ತರಗತಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳಿಂದ ತಮ್ಮ ಬಟ್ಟೆ ತೊಳೆಸುವುದು, ಕೋಣೆ ಸ್ವಚ್ಛಗೊಳಿಸುವುದು, ಪ್ರಾಜೆಕ್ಟ್ ಮಾಡಿಸುವುದು, ಬಸ್ಕಿ ಹೊಡೆಸುವ ಮೂಲಕ ಪುಂಡಾಟ ಮಾಡಿದ್ದಲ್ಲದೇ, ಗುದದ್ವಾರದಲ್ಲಿ ಪೆನ್ಸಿಲ್ ಇಟ್ಟು ಅಸಭ್ಯವಾಗಿ ವರ್ತಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಕಿರುಕುಳಕ್ಕೆ ಒಳಗಾದ ಮಕ್ಕಳು ಪಾಲಕರಿಗೆ ದೂರಿದ್ದಾರೆ.
ಈ ವಿಷಯ ಮನೆಯಲ್ಲಿ ಮತ್ತು ಶಿಕ್ಷಕರಿಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಕಿರಿಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ಮಂಗಳವಾರ ವಿದ್ಯಾರ್ಥಿಗಳ ಪಾಲಕರು ಶಾಲೆಗೆ ಬಂದು ಪ್ರಾಚಾರ್ಯರು ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದಾರೆ. ವಿದ್ಯಾರ್ಥಿಗಳ ಅಶಿಸ್ತಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಚಾರಣೆ ನಡೆಸಿದ ಪ್ರಾಚಾರ್ಯರು ಚಿತ್ರಹಿಂಸೆ ನೀಡಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ.
ಅಧಿಕಾರಿಗಳ ಭೇಟಿ: ಹೇಮಗುಡ್ಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣ ಹೇರೂರು ಭೇಟಿ ನೀಡಿ ವಿಚಾರಣೆ ನಡೆಸಿದರು.ಹೇಮಗುಡ್ಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಐದು ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ತಮಾಷೆ ಮಾಡಿದ್ದು. ಈ ಘಟನೆಗೆ ಸಂಬಂಧಿಸಿದಂತೆ ಐದು ವಿದ್ಯಾರ್ಥಿಗಳನ್ನು ವಸತಿ ನಿಲಯದಿಂದ ಅಮಾನತ್ ಮಾಡಲಾಗಿದೆ ಎಂದು ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯ ರವಿಕುಮಾರ ತಿಳಿಸಿದ್ದಾರೆ.