ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಬರುವ ಭಕ್ತಾದಿಗಳಿಗೆ ತಾಳಬೆಟ್ಟದಿಂದ ಶ್ರೀ ಕ್ಷೇತ್ರದವರೆಗೂ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಫೆ.15ರಿಂದ ಯಾವುದೇ ಪ್ಲಾಸ್ಟಿಕ್ ಬಾಟಲ್‌ಗಳನ್ನು ಉಪಯೋಗಿಸದಂತೆ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ತಿಳಿಸಿದರು.ಮಲೆಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದ ಜತೆ ಮಾತನಾಡಿ, ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ನಡೆಯುವ 5 ದಿನಗಳ ಜಾತ್ರಾ ಮಹೋತ್ಸವಕ್ಕೆ ಕನಕಪುರ, ಬೆಂಗಳೂರು ಗ್ರಾಮಾಂತರ, ಚನ್ನಪಟ್ಟಣ ಹಾಗೂ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಮಾದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಇದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಾಧಿಕಾರದ ವತಿಯಿಂದ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ತಾಳು ಬೆಟ್ಟದಿಂದ ಶ್ರೀ ಕ್ಷೇತ್ರಕ್ಕೆ ಬರುವಂತಹ ಪಾದಯಾತ್ರಿಕರು ಫೆ.15ರಿಂದ ನೀರಿನ ಬಾಟಲ್‌ಗಳನ್ನು ಉಪಯೋಗಿಸಬಾರದು. ಪ್ರಾಧಿಕಾರದ ವತಿಯಿಂದಲೇ ತಾಳು ಬೆಟ್ಟದಿಂದ ಶ್ರೀ ಕ್ಷೇತ್ರದ ವರೆಗೆ 20 ಟ್ಯಾಂಕ್ ಹಾಗೂ ರಂಗಸ್ವಾಮಿ ಒಡ್ಡಿನ ಸಮೀಪ ಶುದ್ಧ ಕುಡಿಯುವ ನೀರಿನ ಘಟಕ ತೆರೆದು ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಈ ನಿಟ್ಟಿನಲ್ಲಿ ಭಕ್ತಾದಿಗಳು ಸಹ ಪ್ರಾಧಿಕಾರದ ಜೊತೆ ಕೈಜೋಡಿಸಬೇಕು ಎಂದು ತಿಳಿಸಿದರು.
ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ಉಚಿತವಾಗಿ ಹಣ್ಣು, ಜ್ಯೂಸ್, ನೀರಿನ ಬಾಟಲ್, ಮಜ್ಜಿಗೆ ನೀಡುವವರು ತಾಳುಬೆಟ್ಟದ ವರೆಗೆ ಮಾತ್ರ ಕೊಡಬೇಕು. ತಾಳು ಬೆಟ್ಟದಿಂದ ಮಾದೇಶ್ವರ ಬೆಟ್ಟದ ವರೆಗೆ ಎಲ್ಲಿಯೂ ನೀಡಲು ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ದಾನಿಗಳು, ಸಂಘ ಸಂಸ್ಥೆಯವರು ಸಹ ಪ್ರಾಧಿಕಾರದ ಜೊತೆ ಕೈಜೋಡಿಸಿ ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಮಾಡಲು ಸಹಕರಿಸಬೇಕು ಎಂದರು.ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು ತಾಳು ಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದವರೆಗೂ ಸಹ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಮಾಡಲಿದ್ದಾರೆ. ಅವರು ಸಹ ಪ್ಲಾಸ್ಟಿಕ್ ನಿಷೇಧದ ಬಗ್ಗೆ ರಸ್ತೆಗಳಲ್ಲಿ ಅರಿವು ಮೂಡಿಸಲಿದ್ದಾರೆ. ಪಾದಯಾತ್ರೆಯ ಮೂಲಕ ಬರುವಂತಹ ಭಕ್ತಾದಿಗಳಿಗೆ ಕಾಡು ಪ್ರಾಣಿಗಳು ರಸ್ತೆಯಲ್ಲಿ ಸಿಗುವುದರಿಂದ ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ ಪಾದಯಾತ್ರೆ ಪ್ರಾರಂಭವಾಗುವ ದಿನಗಳಿಂದ ಜಾತ್ರಾ ಮಹೋತ್ಸವ ಮುಗಿಯುವವರೆಗೂ ಸಿಬ್ಬಂದಿ ನೇಮಕ ಮಾಡುವಂತೆ ಮನವಿ ಮಾಡಲಾಗಿದ್ದು ಅವರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರ
ಶ್ರೀ ಕ್ಷೇತ್ರದಲ್ಲಿಯೂ ಪ್ಲಾಸ್ಟಿಕ್ ನಿಷೇಧ:ಮಹದೇಶ್ವರ ಬೆಟ್ಟದಲ್ಲಿಯು ಸಂಪೂರ್ಣ ಪ್ಲಾಸ್ಟಿಕ್ ಬಳಕೆ ಮಾಡದಂತೆ ಪ್ರಾಧಿಕಾರದ ವತಿಯಿಂದ ಟೆಂಡರ್ ಪಡೆದಿರುವ ಮಳಿಗೆದಾರರಿಗೆ ಸೂಚನೆ ನೀಡಲಾಗಿದೆ. ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಟೆಂಡರ್ ರದ್ದು ಮಾಡಲು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ರಾತ್ರಿ ವೇಳೆ ಪಾದಯಾತ್ರೆಗೆ ನಿರ್ಬಂಧ:ಮಲೆಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಬರುವ ಪಾದಯಾತ್ರಿಕರಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗುವುದು. ಉಳಿದಂತೆ ಇತ್ತೀಚಿನ ದಿನಗಳಲ್ಲಿ ಪಾದಯಾತ್ರೆಯ ಮಾರ್ಗದಲ್ಲಿ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಭಕ್ತರ ಸುರಕ್ಷತೆ ದೃಷ್ಟಿಯಿಂದ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.