ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಾಸಕರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಾಸಕ ದಂಪತಿಗಳನ್ನು ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಅಭಿವೃದ್ಧಿ ಕೆಲಸಗಳಲ್ಲಿ ಅಪಾರ ದಕ್ಷತೆ ಹೊಂದಿರುವ, ಸೌಜನ್ಯ ಹಾಗೂ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿರುವ ನಾಯಕರು ಚಳ್ಳಕೆರೆ ಶಾಸಕ ರಘುಮೂರ್ತಿ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಆಶೀರ್ವದಿಸಿದರು.ನಗರದ ಶಾಸಕರ ಭವನದಲ್ಲಿ ಬುಧವಾರ ನಡೆದ ಶಾಸಕರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ಕ್ಷೇತ್ರದ ಶಾಸಕರ ವ್ಯಕ್ತಿತ್ವ ಮತ್ತು ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಅವರು ಕೇವಲ ರಾಜಕಾರಣಿಯಲ್ಲ, ಹಠಗಾರ, ಛಲಗಾರ ಹಾಗೂ ಸದಾ ಹಸನ್ಮುಖಿಯಾಗಿರುವ ಅಪರೂಪದ ವ್ಯಕ್ತಿತ್ವದವರು. ಸದಾ ಸುಖಿಯಾಗಿರುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಅವರಲ್ಲಿದೆ. ಛಲ ಬಿಡದ ವ್ಯಕ್ತಿತ್ವ. ಸ್ವತಃ ಎಂಜಿನಿಯರ್ ಆಗಿರುವುದರಿಂದ ತಾಂತ್ರಿಕ ಜ್ಞಾನ ಅವರಲ್ಲಿದೆ. ಹೀಗಾಗಿಯೇ ಕ್ಷೇತ್ರದ ಪ್ರತಿ ಅಭಿವೃದ್ಧಿ ಹಂತಗಳಲ್ಲೂ ಅವರು ಅತ್ಯಂತ ದಕ್ಷತೆ ಹಾಗೂ ಪಾರದರ್ಶಕತೆಯನ್ನು ತುಂಬಿದ್ದಾರೆ. ತಮ್ಮ ಸರಳ ಸಜ್ಜನಿಕೆಯಿಂದ ಇಡೀ ಜಿಲ್ಲೆಗೆ ಮಾದರಿ ರಾಜಕಾರಣಿಯಾಗಿದ್ದಾರೆ. ಇಂತಹ ನಾಯಕರಿಗೆ ಸಚಿವ ಸ್ಥಾನ ಸಿಕ್ಕರೆ ಇನ್ನಷ್ಟು ಜನಪರ ಕೆಲಸಗಳು ಸಾಧ್ಯವಾಗುತ್ತವೆ. ಅವರಿಗೆ ಉನ್ನತ ಜವಾಬ್ದಾರಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ, ಎಂದು ಶ್ರೀಗಳು ಹರಸಿದರು.ಭಗೀರಥ ಗುರುಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಕ್ಷೇತ್ರದ ಅಜಾತಶತ್ರು, ಅಭಿವೃದ್ಧಿಯ ಹರಿಕಾರರಾದ ಶಾಸಕ ಟಿ.ರಘುಮೂರ್ತಿ ಅವರಿಗೆ ಜನಪರ ಕಾರ್ಯಗಳನ್ನು ಇನ್ನಷ್ಟು ಹೆಚ್ಚಾಗಿ ಮಾಡಲು ಭಗವಂತನು ಹೆಚ್ಚಿನ ಶಕ್ತಿ ನೀಡಲಿ. ಅವರಿಗೆ ಶೀಘ್ರದಲ್ಲೇ ಸಚಿವ ಭಾಗ್ಯ ದೊರೆಯಲಿ ಎಂದು ಆಶೀರ್ವದಿಸಿದರು.
ಎಲ್ಲರನ್ನೂ ಸಮಾನವಾಗಿ ಕಾಣುವ ಅಜಾತಶತ್ರು ಮತ್ತು ಸದಾ ಹಸನ್ಮುಖಿ ನಾಯಕ. ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣ ಅವರಲ್ಲಿದೆ. ಕ್ಷೇತ್ರದಾದ್ಯಂತ ಶೈಕ್ಷಣಿಕ ಸುಧಾರಣೆ ತರುವಲ್ಲಿ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಅವರು ಶ್ರಮಿಸುತ್ತಿದ್ದಾರೆ. ಅವರೊಬ್ಬ ನಿಜವಾದ ಅಭಿವೃದ್ಧಿ ಹರಿಕಾರ ಹಾಗೂ ಶೈಕ್ಷಣಿಕ ಸುಧಾರಕ. ಬರಡಾಗಿದ್ದ ಚಳ್ಳಕೆರೆ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳನ್ನು ತರುವ ಮೂಲಕ ರೈತರ ಬಾಳಿಗೆ ಬೆಳಕಾಗಿದ್ದಾರೆ. ಇಂತಹ ಜನಪರ ನಾಯಕನಿಗೆ ರಾಜ್ಯ ಮಟ್ಟದಲ್ಲಿ ಉನ್ನತ ಜವಾಬ್ದಾರಿ ಸಿಗಬೇಕು. ಅವರಿಗೆ ಸಚಿವ ಸ್ಥಾನ ಒದಗಿ ಬರಲಿ ಎಂದು ಹಾರೈಸುತ್ತೇನೆ ಎಂದರು.ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕ್ಷೇತ್ರದ ಯಾವುದೇ ಒಂದು ವರ್ಗ ಅಥವಾ ಪ್ರದೇಶಕ್ಕೆ ಸೀಮಿತವಾಗದೆ, ಎಲ್ಲಾ ರಂಗಗಳಲ್ಲೂ ಸಮಾನವಾಗಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿರುವ ಶಾಸಕರ ಕಾರ್ಯವೈಖರಿ ಶ್ಲಾಘನೀಯ. ಕ್ಷೇತ್ರದ ಪ್ರಗತಿಗಾಗಿ ಶ್ರಮಿಸುತ್ತಿರುವ ಇಂತಹ ದಕ್ಷ ನಾಯಕರಿಗೆ ರಾಜ್ಯ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ ಸಿಗಬೇಕಿದೆ. ಅವರಿಗೆ ಸಚಿವ ಸ್ಥಾನ ದೊರೆತರೆ ಕ್ಷೇತ್ರದ ಜೊತೆಗೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಅವರ ಜನಸೇವೆ ಹೀಗೆಯೇ ಮುಂದುವರಿಯಲಿ. ಶಾಸಕರಿಗೆ ಸಚಿವ ಭಾಗ್ಯ ಕೂಡಿಬರಲಿ ಭಗವಂತನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಹರಸಿದರು.
ಸಮಾರಂಭದಲ್ಲಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ, ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಡಿವಾಳ ಗುರುಪೀಠದ ಜಗದ್ಗುರು ಬಸವ ಮಾಚಿದೇವ ಸ್ವಾಮೀಜಿ, ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮೀಜಿ, ಕುಂಬಾರ ಗುಂಡಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವ ಕುಂಬಾರ ಗುಂಡಯ್ಯಾ ಮಹಾಸ್ವಾಮೀಜಿ, ಹಡಪದ ಗುರುಪೀಠದ ಜಗದ್ಗುರು ಅನ್ನಧಾನಿ ಭಾರತೀ ಅಪ್ಪಣ್ಣ ಮಹಾಸ್ವಾಮೀಜಿ, ಮೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ, ಹಾವೇರಿಯ ಶಾಂತಲಿಂಗ ಸ್ವಾಮೀಜಿ, ಬೀದರ ಶಿವಾನಂದ ಸ್ವಾಮೀಜಿ, ತಿಳುವಳ್ಳಿಯ ನಿರಂಜನ ಸ್ವಾಮೀಜಿ, ಕೊಲ್ಲಾಪುರದ ಕಿರಣ ಸ್ವಾಮೀಜಿ, ಬೆಳಗಾವಿಯ ಜಯದೇವ ಸ್ವಾಮೀಜಿ, ಬಂಜಾರ ಸಮುದಾಯದ ನಂದಮಸಂದ ಸ್ವಾಮೀಜಿ ಸೇರಿದಂತೆ 25ಕ್ಕಿಂತ ಹೆಚ್ಚು ಸ್ವಾಮಿಗಳು ಭಾಗವಹಿಸಿದ್ದರು.