ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಮೋಹನ್ ವಿಶ್ವ ಆಗ್ರಹ

| Published : Sep 13 2024, 01:35 AM IST

ಸಾರಾಂಶ

ಸಂಸತ್‍ನಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಾದ ರಾಹುಲ್‍ ಗಾಂಧಿಯವರು ದೇಶದ ಪ್ರಶ್ನೆ ಬಂದಾಗ ದೇಶ ವಿರೋಧಿ ಹೇಳಿಕೆ ನೀಡುತ್ತಿರುವುದು ವಿಪರ್ಯಾಸವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಮೋಹನ್ ವಿಶ್ವ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್‌ ನಾಯಕ ರಾಹುಲ್‍ಗಾಂಧಿ ನಮ್ಮ ದೇಶದ ವಿರೋಧಿಗಳ ನಾಯಕರಂತೆ ವರ್ತಿಸುತ್ತಿದ್ದು, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ದೇಶವನ್ನೇ ಅವಹೇಳನಕಾರಿಯಾಗಿ ಬಿಂಬಿಸುತ್ತಾರೆ. ಇದು ದೇಶಕ್ಕೆ ಮಾಡಿದ ಅವಮಾನ ಎಂದು ರಾಜ್ಯ ಬಿಜೆಪಿ ವಕ್ತಾರ ಮೋಹನ್ ವಿಶ್ವ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಹುಲ್‌ ಗಾಂಧಿ ಅವರು ನಮ್ಮ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾದ ಬಗ್ಗೆ ಒಳ್ಳೆಯ ಮಾತನಾಡುತ್ತಾರೆ. ಸಂಸತ್‍ನಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಾದ ರಾಹುಲ್‍ ಗಾಂಧಿಯವರು ದೇಶದ ಪ್ರಶ್ನೆ ಬಂದಾಗ ದೇಶ ವಿರೋಧಿ ಹೇಳಿಕೆ ನೀಡುತ್ತಿರುವುದು ವಿಪರ್ಯಾಸವಾಗಿದೆ. ಸಂಸತ್‍ನಲ್ಲಿ ಸಂವಿಧಾನದ ಬಗ್ಗೆ ಮಾತನಾಡುವ ಅವರು, ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಾರೆ. ಮೀಸಲಾತಿ ತೆಗೆದು ಹಾಕುತ್ತೇವೆ ಎಂದು ಹೇಳುತ್ತಾರೆ. ಅವರ ಅಜ್ಜ ಮಾಜಿ ಪ್ರಧಾನಿ ನೆಹರು, ಅಜ್ಜಿ ಇಂದಿರಾಗಾಂಧಿ ಹಾಗೂ ಅವರ ತಂದೆ ರಾಹುಲ್‍ಗಾಂಧಿ ಕೂಡ ಮೀಸಲಾತಿ ವಿರೋಧಿಗಳಾಗಿದ್ದರು. ಅಂಬೇಡ್ಕರ್ ಅವರಿಗೆ ತೊಂದರೆ ನೀಡುತ್ತ ಬಂದ ಪಕ್ಷ ಕಾಂಗ್ರೆಸ್. ದಲಿತರನ್ನು ಕೇವಲ ಓಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಬಳಸಿಕೊಂಡು ಬಂದಿದೆ ಎಂದರು.1955ರಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕಾಂಗ್ರೆಸ್ ಮೀಸಲಾತಿ ವಿರೋಧಿಸಿತ್ತು. ಒಬಿಸಿಗಳಿಗೆ ಅನ್ಯಾಯ ಮಾಡಿತ್ತು. ಈಗ ಮತ್ತೆ ರಾಹುಲ್‍ ಗಾಂಧಿ ಹೇಳಿಕೆಯನ್ನು ಬಿಜೆಪಿ ಕಠಿಣವಾಗಿ ಖಂಡಿಸುತ್ತದೆ. ಇದೇ ರೀತಿ ಅವರ ದ್ವಂದ್ವ ಹೇಳಿಕೆಗಳು ಮುಂದುವರೆದರೆ ಬಿಜೆಪಿ ದೇಶದಾದ್ಯಂತ ಪ್ರತಿಭಟನೆ ಮಾಡಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿ ಬೆಲೆ ಏರಿಕೆ , ಭ್ರಷ್ಟಾ ಚಾರ, ಮೇಲಿಂದ ಮೇಲೆ ಹಗರಣಗಳು, ವರ್ಗಾವಣೆಯ ದಂಧೆ ನಡೆಯುತ್ತಿದೆ. ದಲಿತರಿಗಾಗಿ ಮೀಸಲಿಟ್ಟ 24,500 ಸಾವಿರ ಕೋಟಿಯನ್ನು ಗ್ಯಾರಂಟಿಗಾಗಿ ವರ್ಗಾಯಿಸಿದೆ. ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಸ್ವತಃ ಮುಖ್ಯ ಮಂತ್ರಿಗಳೇ ಹೇಳಿಕೆ ನೀಡಿದ್ದಾರೆ. ತಮ್ಮ ಹಳೇ ಚಾಳಿಯನ್ನು ಕಾಂಗ್ರೆಸ್ ಮುಂದುವರೆಸಿದೆ. ರಾಹುಲ್‍ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಕಿಡಿಕಾರಿದರು.ನಾಗಮಂಗಲ ಗಣೇಶೋತ್ಸವದಲ್ಲಿ ನಡೆದ ಕೋಮು ಗಲಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಳೆದ 14 ತಿಂಗಳಿಂದ ಋಣ ಸಂದಾಯ ರಾಜಕಾರಣ ಮಾಡುತ್ತಿದೆ. ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಕೋರರನ್ನು ರಕ್ಷಿಸುವ ಕಾರ್ಯ ಮಾಡಿದೆ. ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಿ ತಲ್ವಾರ್ ಝಳಪಿಸಿದವರನ್ನು ಬಿಟ್ಟು ಗಣೇಶ ಮಂಡಳಿಯವರನ್ನೇ ಠಾಣೆಗೆ ಕರೆದೊಯ್ದಿ ದ್ದಾರೆ. ಈ ರೀತಿಯ ಹಿಂದೂ ವಿರೋಧಿ ಹಾಗೂ ಒಂದು ವರ್ಗದ ಓಲೈಕೆ ರಾಜಕಾರಣ ಮುಂದುವರೆಸಿದರೆ ಜನ ತಕ್ಕ ಪಾಠ ಕಲಿಸುತ್ತಾರೆ. ಬೇರೆ ವರ್ಗಗಳಿಗೆ ಇಲ್ಲದ ನಿರ್ಬಂಧ ಹಿಂದೂ ಹಬ್ಬಗಳಿಗೆ ಮಾತ್ರ ಯಾಕೆ? ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶಿವರಾಜ್, ಬಿ.ಕೆ.ಶ್ರೀನಾಥ್, ಹರಿಕೃಷ್ಣ ಹಾಗೂ ರಾಜ್ಯ ಮಾಧ್ಯಮ ಸದಸ್ಯರಾದ ವಿಜಯೇಂದ್ರ, ಪ್ರಮುಖರಾದ ಅಣ್ಣಪ್ಪ, ಚಂದ್ರಶೇಖರ್, ಶ್ರೀನಾಗ್ ಉಪಸ್ಥಿತರಿದ್ದರು.