ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನವನಕ್ಕೆ ಸೀಮಿತಗೊಳಿಸಿರುವ ಆದೇಶವನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಕ್ಕೂ (ಸೆ.15) ಮುನ್ನ ಹಿಂಪಡೆಯಬೇಕೆಂದು ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಒತ್ತಾಯಿಸಿದ್ದು, ಪತ್ರಕ್ಕೆ 565 ನಾಗರಿಕರು, ಕಾರ್ಯಕರ್ತರ ಸಹಿ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇತಿಹಾಸಕಾರ ರಾಮಚಂದ್ರ ಗುಹಾ, ‘ಪ್ರಜಾಪ್ರಭುತ್ವ ದಿನ (ಸೆ.15) ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಮಾಡಿಕೊಂಡಿರುವ ರಾಜ್ಯ ಸರ್ಕಾರ, ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟಿಸಬೇಕೆಂಬ ನಿರ್ಬಂಧ ಹೇರಿರುವುದು ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜಧಾನಿಯಲ್ಲಿ ಜನಸಾಮಾನ್ಯರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಕಸಿದು, ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟಿಸಬೇಕೆಂಬ ಆದೇಶ ಮಾಡಿರುವುದು ಖಂಡನೀಯ. ‌ನಗರದ ಟೌನ್‌ಹಾಲ್‌, ಮೌರ್ಯ ವೃತ್ತ, ಗಾಂಧಿ ಪ್ರತಿಮೆ, ಮೈಸೂರು ಬ್ಯಾಂಕ್‌ ವೃತ್ತದಂತ ಕೆಲ ಸಾರ್ವಜನಿಕ ಪ್ರದೇಶಗಳಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲು ಅವಕಾಶ ಕಲ್ಪಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು ಎಂದು ಹೇಳಿದರು.

ಉಗ್ರ ಹೋರಾಟ: ವಿಮಲಾ

ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ಸೆ.15ರೊಳಗೆ ಈ ಆದೇಶ ಹಿಂಪಡೆಯದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಮೂಲಭೂತ ಹಕ್ಕುಗಳಿಗಾಗಿ ಹೋರಾಡುವುದು ಕೂಡ ಪ್ರಜಾಪ್ರಭುತ್ವದ ಭಾಗ. ಪ್ರತಿಭಟನೆಗಳನ್ನು ಒಂದೇ ಸ್ಥಳಕ್ಕೆ ಸೀಮಿತ ಮಾಡುವುದು ಪ್ರತಿಭಟನೆಯ ಉದ್ದೇಶವನ್ನೇ ಸೋಲಿಸದಂತೆ ಎಂದರು.

ಆಲ್ ಇಂಡಿಯಾ ಲಾಯರ್ಸ್‌ ಆಸೋಸಿಯೇಶನ್ ಫಾರ್ ಜಸ್ಟೀಸ್ (ಎಐಎಲ್‌ಎಜೆ) ಸಂಸ್ಥೆಯ ವಕೀಲೆ ಮೈತ್ರೇಯಿ ಅವರು ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.