ಕುರುಗೋಡು: ಸಮೀಪದ ಕುಡತಿನಿಯಿಂದ ಸಿದ್ದಮ್ಮನಹಳ್ಳಿ ಮಾರ್ಗದ ಮೂಲಕ ಕುರುಗೋಡಿನ ಐತಿಹಾಸಿಕ ದೊಡ್ಡ ಬಸವೇಶ್ವರ ಸನ್ನಿಧಾನಕ್ಕೆ ಹೋಗಲು ಮತ್ತು ಎರಡು ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರ ಸುಗಮ ಸಂಚಾರಕ್ಕಾಗಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಯೊಂದಿಗೆ ದಶಕಗಳ ಕನಸು ನನಸಾಗಿದೆ ಎಂದು ಸಂಸದ ಈ.ತುಕಾರಾಂ ಹೇಳಿದರು.

ಕುಡತಿನಿ ಪಟ್ಟಣದ ಸಿದ್ದಮ್ಮನಹಳ್ಳಿ ಬಳಿಯಲ್ಲಿ ಸುಮಾರು ₹62 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸರ್ಜಿತ ರೈಲ್ವೆ ಮೇಲ್ವೇತುವೆಯನ್ನು ಶಾಸಕಿ ಈ.ಅನ್ನಪೂರ್ಣ ಸಮ್ಮುಖದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿನ ರೈಲ್ವೆ ಮೇಲ್ವೇತುವೆ ಮಾಡುವುದಕ್ಕೆ ಆದ್ಯತೆ ನೀಡಿ ಪೂರ್ಣಗೊಳಿಸಲಾಗಿದೆ. ಇದರಿಂದ ಮಾರ್ಗದಲ್ಲಿ ಸಂಚರಿಸಲು ಬಹಳಷ್ಟು ಜನತೆಗೆ ಅನುಕೂಲವಾಗಿದೆ. ಶಾಸಕರ ಅನುದಾನದ ಸುಮಾರು ₹42 ಲಕ್ಷ ವೆಚ್ಚದಲ್ಲಿ ಕುಡತಿನಿ ಪಟ್ಟಣದ ಮಹಾದ್ವಾರ ನಿರ್ಮಾಣ ಮಾಡಲಾಗುವುದು. ಜನರ ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುವುದು. 38 ಎಕರೆಯಲ್ಲಿ ಸುಮಾರು ₹240 ಕೋಟಿ ವೆಚ್ಚದಲ್ಲಿ ಮುಂದಿನ 50 ವರ್ಷದಲ್ಲಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ನೀರಿನ ಸಮಸ್ಯೆ ತಲೆದೋರದಂತೆ ಕುಡತಿನಿ, ವೇಣಿ ವೀರಾಪುರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಮುಂದಿನ ದಿನದಲ್ಲಿ ಕುಡತಿನಿಯಲ್ಲಿ 30 ಹಾಸಿಗೆವುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ತರಲಾಗುವುದು. ಕ್ಷೇತ್ರದ ಅಭಿವೃದ್ಧಿ ಜೊತೆಗೆ ಅಖಂಡ ಬಳ್ಳಾರಿ ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನಂತರ ಇಲ್ಲಿನ ಏಳುಬೆಂಚಿ ಗ್ರಾಮಕ್ಕೆ ತೆರಳುವ ರೈಲ್ವೆ ಗೇಟ್ ಬಳಿಯಲ್ಲಿ ಕಾಯ್ದಿರಿಸಿರುವ ಜಾಗದಲ್ಲಿ ಸುಮಾರು ₹3.47 ಕೋಟಿ ಅನುದಾನದಲ್ಲಿ ಘನತ್ಯಾಜ್ಯ ಅಭಿವೃದ್ಧಿ ಕಾಮಗಾರಿಗೆ ಸಂಸದ ಈ.ತುಕಾರಾಂ, ಶಾಸಕಿ ಅನ್ನಪೂರ್ಣ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಏಕಾಂಬ್ರಪ್ಪ, ಕುಡತಿನಿ ಪಪಂ ಮಾಜಿ ಅಧ್ಯಕ್ಷ ವಿ.ರಾಜಶೇಖರ, ಮುಖ್ಯಾಧಿಕಾರಿ ಶಿವಲಿಂಗಪ್ಪ, ಮುಖಂಡರಾದ ಕನ್ನೇರಿ ಪಂಪಾಪತಿ, ಸತ್ಯಪ್ಪ, ವೆಂಕಟೇಶ, ಕಾಮೇಶ್ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ವಿವಿಧ ಇಲಾಖೆ ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು.