ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬರಗಾಲ, ಬಿರುಬಿಸಿಲು ಹಾಗೂ ಬಿಸಿಗಾಳಿಗೆ ಬೇಸತ್ತು ಹೋಗಿದ್ದ ಜಿಲ್ಲೆಯ ಜನರಿಗೆ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಖುಷಿ ನೀಡಿದೆ. ಕೃಷಿ ಚಟುವಟಿಕೆಗೆ ಸಿದ್ಧರಾಗುತ್ತಿರುವ ರೈತರಲ್ಲಿಯೂ ಮಳೆಯ ಹನಿಗಳು ಮಂದಹಾಸ ಮೂಡಿಸಿವೆ.ಗುರುವಾರ ಸಂಜೆ ಜಿಲ್ಲೆಯ ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ತೀರ್ಥಹಳ್ಳಿ, ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ.
ಎರಡು ದಿನಗಳ ಹಿಂದೆಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಮೂರು ತಿಂಗಳಿಂದ ಜನ ಬಿಸಿಲು ಮತ್ತು ಅರೆಝಳಕ್ಕೆ ರೋಸಿ ಹೋಗಿದ್ದರು. ಮಳೆ ಬರಲು ಆರಂಭಿಸಿದ ಬಳಿಕ ಬಿಸಿಲಿನ ತಾಪವೂ ಕಡಿಮೆಯಾಗಿದ್ದು, ತಂಪನೆಯ ವಾತಾವರಣವಿತ್ತು.ತೀರ್ಥಹಳ್ಳಿಯ ಬಿದರಗೋಡು, ಹೊನ್ನೇತಾಳು, ಅರೆಹಳ್ಳಿ, ತೀರ್ಥಮತ್ತೂರು, ಹೊಸಹಳ್ಳಿ, ಹೊದಲ ಅರಳಾಪುರ, ಆರಗ, ನೊಣಬೂರು, ಅಗ್ರಹಾರ, ಹಾದಿಗಲ್ಲು. ಶಿವಮೊಗ್ಗ ತಾಲೂಕಿನ ಬಿದರೆ, ಹಸೂಡಿ, ಪಿಳ್ಳಂಗೆರೆ, ಸೂಗೂರು, ಕುಂಚೇನಹಳ್ಳಿಯಲ್ಲಿ ಮಳೆ ಸುರಿದಿದೆ.
ಶಿಕಾರಿಪುರದ ಕಾಗಿನೆಲ್ಲಿ, ಮುದ್ದನಹಳ್ಳಿ, ಗೊಂಡನಕೊಪ್ಪ, ಅಂಬಾರಗೊಪ್ಪ, ಅಮಟೆಕೊಪ್ಪ, ಮಡುಬಸಿದ್ದಾಪುರ, ಜಕ್ಕನಹಳ್ಳಿ, ಹಿರೆಜಂಬೂರು, ತಡಗಣಿ, ಬಳ್ಳಿಗಾವಿ, ತಾಳಗುಂದ, ಬಿಳಕಿ, ಇನಾಂ ಅಗ್ರಹಾರ, ಚಿಕ್ಕಮಾಗಡಿಯಲ್ಲಿ ಮಳೆಯಾಗುತ್ತಿದೆ. ಸೊರಬ ತಾಲೂಕಿನ ಚಿತ್ತೂರು, ಇಂಡುವಳ್ಳಿ, ಶಿಗ್ಗಾ, ಹೆಗ್ಗೋಡು, ಮಳವಿ, ಹೊಸಬಾಳೆ, ಮಟುಗುಪ್ಪೆ, ನ್ಯಾರ್ಸಿ, ಬೆನ್ನೂರು, ಹರೀಶಿ ಭಾಗದಲ್ಲಿ ಮಳೆಯಾಗಿದೆ.ಸಾಗರ ತಾಲೂಕಿನ ಆಚಾಪುರ, ಹೊಸೂರು, ಹಿರೆಬಿಲಗುಂಜಿ, ತ್ಯಾಗರ್ತಿ, ನಾಡಕಲಸಿ, ಮಾಲ್ವೆ, ಕೆಳದಿ, ಹಿರೆನಲ್ಲೂರು, ಕಾಂಡಿಕಾ ಸುತ್ತಮುತ್ತ ಮಳೆಯಾಗಿದೆ. ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಜೋರು ಮಳೆ ಆರಂಭವಾಗಿದೆ. ನಗರದ ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ಜೋರು ಮಳೆಯಿಂದಾಗಿ ವಾತಾವರಣ ತಂಪಾಗಿತ್ತು.---
ಅಡಕೆ ಬೆಳೆಗಾರರು ನಿಟ್ಟುಸಿರುಬ್ಯಾಕೋಡು: ಶರಾವತಿ ಕಣಿವೆ ಭಾಗದ ಬ್ಯಾಕೋಡು, ನಿಟ್ಟೂರು, ಬರುವೆ, ಸಿಗಂದೂರು, ತುಮರಿ ಭಾಗದಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ರೈತರಿಗೆ ಸಂತಸ ತಂದಿದೆ. ಕಳೆದೊಂದು ವಾರದಿಂದ ಈ ಭಾಗದಲ್ಲಿ ಮೋಡ ಕವಿದ ವಾತಾವರಣದಿಂದ ಕೂಡಿತ್ತು, ಬಿಸಿಲ ಬೇಗೆಗೆ ಜನರು ಹೈರಾಣಾಗಿದ್ದರು. ಅಧಿಕ ಉಷ್ಣಾಂಶದಿಂದ ರೈತರು ಕೃಷಿ ಚಟುವಟಿಕೆ ನಡೆಸಲು ಹೊಲಗಳಿಗೆ ಹೋಗಲು ಹಿಂಜರಿಯುತ್ತಿದ್ದರು. ಗುರುವಾರ ಸಂಜೆ ವೇಳೆ ಉತ್ತಮ ಮಳೆಯಾಗಿದ್ದು, ಈ ಭಾಗದ ಅಡಕೆ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಏಕಾಏಕಿ ಮಳೆ ಸುರಿದ ಪರಿಣಾಮ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾಮೀಣ ಪ್ರದೇಶದ ಹಲವು ರಸ್ತೆಗಳಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ಸವಾರರು ತೊಂದರೆ ಅನುಭವಿಸಿದರು.
----------ಉತ್ತಮ ಮಳೆ. ರೈತರಲ್ಲಿ ಮೂಡಿದ ಸಂತಸ.
ಹೊಳೆಹೊನ್ನೂರು: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಸಂಜೆ ನಾಲ್ಕು ಘಂಟೆಗೆ ಆರಂಭವಾದ ಮಳೆ ಭಾರೀ ಗಾಳಿ, ಗುಡುಗು ಮತ್ತು ಮಿಂಚು ಸೇರಿದಂತೆ ಸುಮಾರು ಒಂದು ಗಂಟೆ ಕಾಲ ಸತತವಾಗಿ ಸುರಿಯಿತು. ಯಡೇಹಳ್ಳಿ, ಅಶೋಕನ ನಗರ, ಅಗರದಹಳ್ಳಿ, ಚಂದನಕೆರೆ, ಕಲ್ಲಿಹಾಳ್, ಬೈರನಹಳ್ಳಿ, ಅರಹತೊಳಲು, ಅರಕೆರೆ, ಅರಬಿಳಚಿ, ವಿಠಲಾಪುರ, ಜಂಭರಘಟ್ಟೆ, ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನ ಹಳ್ಳಿ, ಹನುಮಂತಾಪುರ ಸೇರಿ ಎಲ್ಲೆಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯ ಮೋಡ ಆವರಿಸುತ್ತಿದ್ದು ಮಳೆ ಮಾತ್ರ ಬಂದಿರಲಿಲ್ಲ. ಇದರಿಂದ ಕಂಗಾಲಾಗಿದ್ದ ರೈತರು ಪ್ರತೀ ದಿನ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಗುರುವಾರ ಮಳೆ ಬೀಳಲು ಆರಂಭಿಸಿದ ಕೂಡಲೇ ಸಂತಸಗೊಂಡ ರೈತರು ವರುಣ ದೇವನಿಗೆ ಕೈ ಮುಗಿದು ಸ್ವಾಗತಿಸಿದರು.-------------------------------------