ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆ, ರೈತ, ಯುವ ಸಮೂಹ ಹಾಗೂ ಬಡವರ ಅಭಿವೃದ್ಧಿ ಕೈಗೊಂಡಿರುವ ಮತ್ತು ಅನುಷ್ಠಾನಗೊಂಡಿರುವ ಯೋಜನೆಗಳ ಬಗ್ಗೆ ಪ್ರತಿ ಮನೆಗೂ ತಿಳಿಸಿ 3ನೇ ಬಾರಿ ಮೋದಿಯರನ್ನು ಪ್ರಧಾನಿ ಮಾಡುವ ಸಂಕಲ್ಪ ಕೈಗೊಳ್ಳಬೇಕೆಂದು ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಎಸ್.ಎ. ರಾಮದಾಸ್ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು ದೇಶದ 86 ಕೋಟಿ ಜನರು ಕೇಂದ್ರ ಸರ್ಕಾರದ ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಾಗಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಸಾಧನೆಗಳ ಬಗ್ಗೆ ಸಕರಾತ್ಮಕ ಧೋರಣೆಯನ್ನು ತಳೆದಿದ್ದಾರೆ, ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಜನರಿಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡುವ ಮೂಲಕ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲುವಂತೆ ಮಾಡಬೇಕೆಂದು ತಿಳಿಸಿದರು.ನೆಹರೂ ಬಿಟ್ಟರೆ ಮೂರನೇ ಬಾರಿ ಪ್ರಧಾನಿಯಾಗುವ ಸುವರ್ಣಾವಕಾಶ ಮೋದಿಯವರಿಗೆ ಮಾತ್ರ ಇದ್ದು, ಅವರ ಸಾಧನೆಗಳೇ ಇದಕ್ಕೆ ಪೂರಕವಾಗಿವೆ, 10 ವರ್ಷಗಳ ಅವಧಿಯಲ್ಲಿ ಶೇ.17ರಷ್ಷು ಅಂದರೆ 25 ಕೋಟಿ ಜನರು ಬಡತನ ರೇಖೆಯಿಂದ ಮುಕ್ತರಾಗಿದ್ದಾರೆ ಎಂದರು.
ವಿಶ್ವದಲ್ಲಿ 5ನೇ ಆರ್ಥಿಕ ಶಕ್ತಿಯಾಗಿರುವ ಭಾರತ ೩ನೇ ಶಕ್ತಿಯಾಗಿ ಹೊರಹೊಮ್ಮಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಜಾತಿ ಆಧಾರಿತ, ಧರ್ಮಾಧಾರಿತ ಮೇಲೆ ಮತ ಕೇಳದೇ, ಅಭಿವೃದ್ಧಿಯ ಆಧಾರದ ಮೇಲೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದರು.ಸುಮಾರು 2 ಕೋಟಿ ಮಹಿಳಾ ಸ್ವಸಹಾಯಗಳು ಕೇಂದ್ರ ಸರ್ಕಾರದ ಯೋಜನೆಯ ಫಲಾನುಭವಿಗಳಾಗಿದ್ದಾರೆ, ಸಂಸದ ವಿ. ಶ್ರೀ ನಿವಾಸ ಪ್ರಸಾದ್ ರಾಜಕೀಯ ನಿವೃತ್ತಿ ಹೊಂದುತ್ತಿದ್ದಾರೆ, ಆದ್ದರಿಂದ ಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಯಾರೇ ಆಗಲೀ ಎಲ್ಲರೂ ಒಟ್ಟಾಗಿ ಪಕ್ಷವನ್ನು ಗೆಲ್ಲಿಸಿ ಎಂದರು.
ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಪ್ರತ್ಯೇಕ ರಾಷ್ಟ್ರದ ಕೂಗು ನೀಡಿರುವ ಸಂಸದ ಡಿ.ಕೆ. ಸುರೇಶ್ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು, ಸಂವಿಧಾನದ ಸಾರ್ವಭೌಮತೆಯನ್ನು ಗೌರವಿಸಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿ, ಈಗ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಆರೋಪ ಮಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ 2004 ರಿಂದ 2014ರ ವರೆಗೆ ಯುಪಿಎ ಸರ್ಕಾರ ಕೊಟ್ಟಿರುವ ಅನುದಾನ ಮತ್ತು 2014 ರಿಂದ 2023 ರವರೆಗೆ ಬಿಜೆಪಿ ಸರ್ಕಾರ ಕೊಟ್ಟಿರುವ ಅನುದಾನ ಬಗ್ಗೆ ತುಲನೆ ಮಾಡಿ ಸತ್ಯ ಹೇಳಲಿ, ಯುಪಿಎ ಸರ್ಕಾರ ರಾಜ್ಯಕ್ಕೆ 86 ಸಾವಿರ ಕೋಟಿ ತೆರಿಗೆ ಹಣ ನೀಡಿದ್ದರೆ ಬಿಜೆಪಿ ಸರ್ಕಾರ ಕೊಟ್ಟಿರುವುದು 2 ಲಕ್ಷ 86 ಸಾವಿರ ಕೋಟಿ ಇದನ್ನು ಜನರಿಗೆ ಮನದಟ್ಟು ಮಾಡದೆ, ಸುಳ್ಳು ಗ್ಯಾರಂಟಿಗಳ ಮೂಲಕ ಜನರಿಗೆ ಈ ಸರ್ಕಾರ ಮೋಸ ಮಾಡುತ್ತಿದೆ ಎಂದರು.
ಹೆಚ್ಚು ವಿದೇಶಿ ಬಂಡವಾಳ ಬರುವ ರಾಜ್ಯಗಳಲ್ಲಿ ಕರ್ನಾಟಕವು ಒಂದು, ಆದ್ದರಿಂದ ತೆರಿಗೆ ಹಣ ಹೆಚ್ಚು ಬರುತ್ತಿದೆ, ಅತ್ಯಂತ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಈ ಹಣ ಉಪಯೋಗಿಸಲಾಗುತ್ತಿದೆ, ಇದು ಸಂವಿಧಾನದ ನಿಯಮ, ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಆಗಿರುವ ರಸ್ತೆ ಅಭಿವೃದ್ಧಿ, ವಿಮಾನ ನಿಲ್ದಾಣ, ಸಾಲ ಸೌಲಭ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದರು. ರಾಜ್ಯ ಸರ್ಕಾರದ ರೈತ ಮತ್ತು ದಲಿತ ವಿರೋಧಿ ನಡೆಗಳ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮತ್ತು ಎಸ್. ಬಾಲರಾಜು, ಎಂ.ರಾಮಚಂದ್ರ, ಮಂಗಲ ಶಿವಕುಮಾರ್, ಮೋದಿಯವರಿಗೆ ಅಭಿನಂದನೆ ಮತ್ತು ರಾಜ್ಯ ಸರ್ಕಾರದ ರೈತ ಮತ್ತು ದಲಿತ ವಿರೋಧಿ ನಡೆಗಳ ಬಗ್ಗೆ ಖಂಡನಾ ನಿರ್ಣಯ ಮಂಡಿಸಿ 500 ವರ್ಷಗಳ ಸಮಸ್ಯೆಯನ್ನು ಬಗೆಹರಿಸಿ, ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಮೋದಿಯವರಿಗೆ ಅಭಿನಂದನೆ, ಎಸ್‌ಇಪಿ, ಟಿಎಸ್‌ಪಿ ಹಣದಲ್ಲಿ 11 ಸಾವಿರ ಕೊಟಿ 14 ಲಕ್ಷ ಹಣವನ್ನು ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗೆ ಉಪಯೋಗಿಸಿರುವ ಮತ್ತು ಬರಗಾಲದಲ್ಲಿ ರೈತರಿಗೆ ನೆರವಾಗದೇ ಇರುವ ರಾಜ್ಯಕಾಂಗ್ರೆಸ್ ಸರ್ಕಾರದ ವಿರುದ್ದ ಖಂಡನಾ ನಿರ್ಣಯ ಕೈಗೊಂಡರು, ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಅನುಮೋದಿಸಿದರು.ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಮುಖಂಡ ಮೈವಿ ರವಿಶಂಕರ್ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು. ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಫಣೀಶ್, ನೂರೊಂದುಶೆಟ್ಟಿ, ಪ್ರೀತಂ ನಾಗಪ್ಪ, ಆರ್.ಸುಂದರ್, ನಾರಾಯಣಪ್ರಸಾದ್, ಆಲೂರು ನಟರಾಜು, ಕುಮಾರಸ್ವಾಮಿ ಇತರರು ಇದ್ದರು.