ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ತುರ್ತು ಪರಿಸ್ಥಿತಿ ಸಂದರ್ಭ ಬೆಂಗಳೂರಿನ ಕಾರಾಗೃಹದಲ್ಲಿ ಲಾಲಕೃಷ್ಣ ಆಡ್ವಾಣಿ ಹಾಗೂ ರಾಮಕೃಷ್ಣ ಹೆಗಡೆ ಒಂದೇ ಸೆಲ್‌ನಲ್ಲಿ ಇದ್ದಾಗ ಆಡ್ವಾಣಿ ಅವರಿಗೆ ಹೆಗಡೆ ಕನ್ನಡ ಕಲಿಸಲು ತೊಡಗುತ್ತಾರೆ. ಹೆಸರು, ಸಹಿ, ಕನ್ನಡ ಪತ್ರಿಕೆಗಳ ಹೆಡ್ಡಿಂಗ್ ಹೀಗೆ ಕನ್ನಡದ ಟೀಚರ್ ಆಗುತ್ತಾರೆ. ಇಬ್ಬರ ನಡುವೆ ಅನ್ಯೋನ್ಯ ಸಂಬಂಧ ಏರ್ಪಡುತ್ತದೆ. ಅಲ್ಲಿಂದಲೇ ಆಡ್ವಾಣಿ ಹಾಗೂ ಉತ್ತರ ಕನ್ನಡಕ್ಕೆ ರಾಮಕೃಷ್ಣ ಹೆಗಡೆ ಮೂಲಕ ನಂಟು ಶುರುವಾಗುತ್ತದೆ.ಕಾರಾಗೃಹದಲ್ಲಿದ್ದಾಗ ಹೆಗಡೆ ಅವರ ಪತ್ನಿ ಶಕುಂತಲಾ ಹೆಗಡೆ ಬೆಳಗ್ಗೆ ಇಡ್ಲಿ ತರುತ್ತಿದ್ದರು. ಬೆಳಗಾಗುತ್ತಿದ್ದಂತೆ ಇಡ್ಲಿಗಾಗಿ ನಾನು ಸೆಲ್‌ನಿಂದ ಎರಗಿ ಎರಗಿ ನೋಡುತ್ತಿದ್ದೆ ಎಂದು ಆಡ್ವಾಣಿ ಕುಮಟಾಕ್ಕೆ ಬಂದಾಗ ನೆನಪಿನ ಸುರುಳಿ ಬಿಚ್ಚಿಟ್ಟಿದ್ದರು.
ಆಡ್ವಾಣಿ ಜಿಲ್ಲೆಗೆ ಬಂದಾಗಲೆಲ್ಲ ಮೊದಲ ಹತ್ತು ನಿಮಿಷ ಹೆಗಡೆ ಅವರೊಂದಿಗೆ ಕಾರಾಗೃಹದಲ್ಲಿ ಇದ್ದ ದಿನಗಳು, ಅವರ ಜತೆ ಒಡನಾಟವನ್ನು ಸ್ಮರಿಸುತ್ತಿದ್ದರು.1998ರಲ್ಲಿ ಹೆಗಡೆ ಸ್ಥಾಪಿಸಿದ ಲೋಕಶಕ್ತಿ ಹಾಗೂ ಬಿಜೆಪಿ ಒಂದಾಯಿತು. ಆಗ ಶಿರಸಿಗೆ ಆಡ್ವಾಣಿ ಆಗಮಿಸಿ ಹೆಗಡೆ ಅವರ ಜತೆಯಲ್ಲಿ ಪ್ರಚಾರ ಭಾಷಣ ಮಾಡಿದರು.
ಭಟ್ಕಳ ಶಾಸಕರಾಗಿದ್ದ ಡಾ. ಚಿತ್ತರಂಜನ್ ಹತ್ಯೆಯಾದಾಗಲೂ ಆಡ್ವಾಣಿ ಭಟ್ಕಳಕ್ಕೆ ಆಗಮಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.2008ರಲ್ಲಿ ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ ಶಶಿಭೂಷಣ ಹೆಗಡೆ ಕುಮಟಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾಗ ಆಡ್ವಾಣಿ ಕುಮಟಾಕ್ಕೆ ಬಂದು ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ್ದರು. 2004ರಲ್ಲಿ ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ ಹೆಗಡೆ ಅವರನ್ನು ಸೋಲಿಸಿದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ, ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದ್ದರು.
2011ರಲ್ಲಿ ಆಡ್ವಾಣಿ ಹಮ್ಮಿಕೊಂಡ ರಥ ಯಾತ್ರೆ ಮುರ್ಡೇಶ್ವರದ ಮೂಲಕ ಕುಮಟಾಕ್ಕೂ ಆಗಮಿಸಿತ್ತು. ಕುಮಟಾದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಆಡ್ವಾಣಿ ಮಂದಿರ ನಿರ್ಮಾಣದ ಬಗ್ಗೆ ಅಬ್ಬರಿಸಿದ್ದರು.ರಥಯಾತ್ರೆಗಾಗಿ ಆಡ್ವಾಣಿ ಮುರ್ಡೇಶ್ವರಕ್ಕೆ ಬಂದಾಗ ಬೆಂಗಳೂರು ಸಂಸದ ಅನಂತಕುಮಾರ್ ಅವರಿಗೆ ಕರೆ ಮಾಡಿ ಶಶಿಭೂಷಣ ಹೆಗಡೆ ಎಲ್ಲಿದ್ದಾರೆ? ಅವರಿಗೆ ಬರಲಿಕ್ಕೆ ಹೇಳಿ ಎಂದು ಶಶಿಭೂಷಣ ಹೆಗಡೆ ಅವರನ್ನು ಕರೆಸಿಕೊಂಡಿದ್ದರು. ಜಿಲ್ಲೆಯಲ್ಲಿ ಸಂಭ್ರಮ: ಲಾಲಕೃಷ್ಣ ಆಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲೂ ಸಂಭ್ರಮಕ್ಕೆ ಕಾರಣವಾಗಿದೆ. ಮುರ್ಡೇಶ್ವರ, ಕುಮಟಾ, ಶಿರಸಿ, ಭಟ್ಕಳಕ್ಕೆ ಅವರು ಭೇಟಿ ನೀಡಿದ್ದರು. ಚುನಾವಣಾ ಪ್ರಚಾರ ಸಭೆ ನಡೆಸಿದ್ದರು. ರಾಮಕೃಷ್ಣ ಹೆಗಡೆ ಅವರ ತವರು ಜಿಲ್ಲೆಯಾದ ಉತ್ತರ ಕನ್ನಡದ ಮೇಲೆ ಆಡ್ವಾಣಿ ಅವರಿಗೆ ವಿಶೇಷ ಮಮತೆ ಇದೆ.ನಾನು ಕುಮಟಾದಲ್ಲಿ ಸ್ಪರ್ಧಿಸಿದಾಗ ಪ್ರಚಾರ ಭಾಷಣಕ್ಕೆ ಆಡ್ವಾಣಿ ಬಂದಿದ್ದು ನನಗೆ ಭೀಮ ಬಲವನ್ನು ತಂದುಕೊಟ್ಟಿತು. ಜತೆಗೆ ಅವರು ಪ್ರಚಾರಕ್ಕೆ ಬಂದಿದ್ದು ಅಚ್ಚರಿಗೂ ಕಾರಣವಾಗಿತ್ತು ಬಿಜೆಪಿ ಮುಖಂಡ ಡಾ. ಶಶಿಭೂಷಣ ಹೆಗಡೆ ಹೇಳಿದರು.