ಹೆಚ್ಚು ತೋಟಗಾರಿಕೆ ಬೆಳೆ ಬೆಳೆದರೆ ಆರ್ಥಿಕ ಶಕ್ತಿ ವೃದ್ಧಿ: ಡಿ.ಸುಧಾಕರ್

| Published : Feb 04 2024, 01:34 AM IST

ಹೆಚ್ಚು ತೋಟಗಾರಿಕೆ ಬೆಳೆ ಬೆಳೆದರೆ ಆರ್ಥಿಕ ಶಕ್ತಿ ವೃದ್ಧಿ: ಡಿ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು , ಇದರಿಂದ ಆರ್ಥಿಕವಾಗಿ ಮುನ್ನಡೆ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಲಹೆ ನೀಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ 31ನೇ ಫಲ-ಪುಷ್ಪ ಪ್ರದರ್ಶನಕ್ಕೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಜಿಲ್ಲೆಯ ರೈತರು ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿ, ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ತರಕಾರಿ, ಫಲ-ಪುಷ್ಪ ಬೆಳೆಗಳನ್ನು ಬೆಳೆಯುವ ಮೂಲಕ ತೋಟಗಾರಿಕೆ ಬೆಳೆಗಳನ್ನು ಅವಲಂಬಿಸಿದ್ದಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ರೈತರು ಕೂಡ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಸರ್ಕಾರ ಅಥವಾ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ಫಲ-ಪುಷ್ಪ ಪ್ರದರ್ಶನ ವೀಕ್ಷಿಸುವ ಮೂಲಕ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳ ಮಾಹಿತಿ ಪಡೆದು, ತೋಟಗಾರಿಕೆ ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಗಳಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಜಿಲ್ಲೆಯ ರೈತರಿಗೆ, ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡುವ ಫಲ-ಪುಷ್ಪ ಪ್ರದರ್ಶನ ಆಯೋಜಿಸ ಲಾಗಿದೆ. ಜಿಲ್ಲೆಯ ರೈತರಿಗೆ ಅವಶ್ಯಕವಿರುವ ಕೋಲ್ಡ್ ಸ್ಟೋರೇಜ್ ಘಟಕ ಹಾಗೂ ಜಿಲ್ಲೆಗೆ ಗ್ಲಾಸ್‍ಹೌಸ್ ಮಂಜೂರು ಮಾಡಿ, ಮುಂದಿನ ಬಾರಿಯ ಫಲ-ಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಗ್ಲಾಸ್‍ಹೌಸ್‍ನಲ್ಲಿಯೇ ಆಯೋಜನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಮನವಿ ಮಾಡಿದರು.

ಬಸವಣ್ಣನ ಕಲಾಕೃತಿ: 12ನೇ ಶತಮಾನದಲ್ಲಿ ಸಮಸಮಾಜದ ಚಿಂತನೆಯಲ್ಲಿ ಅನುಭವ ಮಂಟಪ ಸ್ಥಾಪಿಸಿ ಸರ್ವಸಮಾನತೆಯ ಕನಸನ್ನು ಸರ್ವಕಾಲಿಕ ನನಸನ್ನಾಗಿಸಿದ ಧೀಮಂತ ಶಕ್ತಿ ಬಸವಣ್ಣನವರ ಕಲಾಕೃತಿ, ಇದರ ಜೊತೆಗೆ ಶ್ರೀ ಶಿವಕುಮಾರ ಸ್ವಾಮಿಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಶ್ರೀ ಪುಟ್ಟರಾಜ ಗವಾಯಿಗಳ ಪ್ರತಿಕೃತಿಗಳು, ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ವಿವಿಧ ಪುಷ್ಪ ಸಸಿಗಳು, ತಳಿಗಳು ಫಲ-ಪುಷ್ಪ ಪ್ರದರ್ಶನದಲ್ಲಿ ಗಮನಸೆಳೆಯುತ್ತಿವೆ.

ಶಾಸಕ ಬಿ.ಜಿ.ಗೋವಿಂದಪ್ಪ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಮುಖ್ಯ ಯೋಜನಾಧಿಕಾರಿ ಸತೀಶ್ ರೆಡ್ಡಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ತಹಶೀಲ್ದಾರ್ ಡಾ.ನಾಗವೇಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿ ಬಿ.ದೇವರಾಜು, ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ನಾಗರಾಜ ಬೇದ್ರೆ, ಸಹಕಾರ್ಯದರ್ಶಿ ಗಿರೀಶ್ ಇದ್ದರು.ಮಹಾನ್‌ ಚೇತನ ನಾಲ್ವಡಿ, ವಿಕ್ರಮ್, ಪ್ರಗ್ಯಾನ್ ಪ್ರತಿಕೃತಿ

ವಿವಿಧ ಹೂಗಳಿಂದ ಅಲಂಕರಿಸುವ ಭಾರತ ಸಂವಿಧಾನದ ಕಲಾಕೃತಿ, ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅವರು ಚಂದ್ರ ಯಾನ-3 ಯಶ್ವಸಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ದೃಶ್ಯ ಫಲಪುಷ್ಪ ಪ್ರದರ್ಶನದ ವಿಶೇಷ ಚಿತ್ರಣವಾಗಿತ್ತು. ಚಂದ್ರನ ಅಂಗಳ ದಲ್ಲಿ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಪ್ರತಿಕೃತಿ, ಐತಿಹಾಸಿಕ ಚಿತ್ರದುರ್ಗ ಕೋಟೆಯ ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿ ಹೊಂಡ, ಸಿಹಿ ನೀರು ಹೊಂಡ ಹಾಗೂ ಸಂತೆ ಹೊಂಡಗಳು ಒಂದಕ್ಕೊಂದು ಸಂಪರ್ಕಿಸಿರುವ ಮಳೆ ನೀರು ಕೊಯ್ಲು ಘಟಕದ ಮಾದರಿಗಳ ಪ್ರದರ್ಶನ, ವಾಣಿವಿಲಾಸ (ಮಾರಿ ಕಣಿವೆ) ಅಣೆಕಟ್ಟು ಕಟ್ಟಿ ಜಿಲ್ಲೆಯ ಜನರ ದಾಹ ತಣಿಸಿದ, ರೈಲುಮಾರ್ಗ, ರಸ್ತೆ ಮಾರ್ಗ ಕಲ್ಪಿಸಿದ ಮಹಾಚೇತನ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಕೃತಿ ನೋಡುಗರ ಗಮನ ಸೆಳೆದವು.