ಸಾರಾಂಶ
ಹೊಸದುರ್ಗ ಪಟ್ಟಣದ ಮದಕರಿ ವೃತ್ತದಲ್ಲಿ ಗುರುವಾರ ಗಂಡುಗಲಿ ರಾಜ ವೀರ ಮದಕರಿ ನಾಯಕರ ಪುಣ್ಯಸ್ಮರಣೆಯ ನಿಮಿತ್ತವಾಗಿ ಮದಕರಿ ನಾಯಕರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ರಾಜ ವೀರ ಮದಕರಿ ನಾಯಕರು ಚಿತ್ರದುರ್ಗ ಮಾತ್ರವಲ್ಲದೇ ಕನ್ನಡ ನಾಡಿನ ಜನರ ಅಸ್ಮಿತೆಯಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಚಿತ್ರದುರ್ಗ ನಗರದಲ್ಲಿ ಥೀಮ್ ಪಾರ್ಕ್ ಮಾಡುತ್ತೇವೆಂದು ಹೇಳಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತು ತಪ್ಪಿದ್ದಾರೆ. ಕೇಂದ್ರ ಸರ್ಕಾರ ಈಗಲಾದರೂ ಮದಕರಿ ನಾಯಕರ ಥೀಮ್ ಪಾರ್ಕ್ ಮಾಡುವ ಕೆಲಸಕ್ಕೆ ಮುಂದಾಗಲಿ ಎಂದು ಹೊಸದುರ್ಗ ತಾಲೂಕು ನಾಯಕ ಸಮಾಜದ ಉಪಾಧ್ಯಕ್ಷ ಎನ್.ತಿಪ್ಪೇಸ್ವಾಮಿ ಒತ್ತಾಯಿಸಿದರು.ಪಟ್ಟಣದ ಮದಕರಿ ವೃತ್ತದಲ್ಲಿ ಗುರುವಾರ ಗಂಡುಗಲಿ ರಾಜ ವೀರ ಮದಕರಿ ನಾಯಕರ ಪುಣ್ಯಸ್ಮರಣೆ ನಿಮಿತ್ತವಾಗಿ ಮದಕರಿ ನಾಯಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಚಿತ್ರದುರ್ಗದ ನಾಯಕರಲ್ಲಿ ಕಡೆಯ ನಾಯಕನಾಗಿದ್ದ ಮದಕರಿ ನಾಯಕ, ಚಿತ್ರದುರ್ಗದ ಸಿಂಹಾಸನವನ್ನು ಅಲಂಕರಿಸಿದಾಗ 12 ವಯಸ್ಸಿನವನಾಗಿದ್ದನು. ಅತಿ ಚಿಕ್ಕ ವಯಸ್ಸಿಗೆ ಚಿತ್ರದುರ್ಗ ಸಂಸ್ಥಾನವನ್ನು ಆಳಿದ ಕೀರ್ತಿ ಇವರಗಿದೆ. ದುರ್ಗದ ವೈರಿಗಳು ಕೋಟೆಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಬೇಡ ಸಮುದಾಯ ತಮ್ಮ ನಾಯಕನಿಗೆ ನಿಷ್ಠರಾಗಿ ಉಳಿದು, ಆತನನ್ನು ರಕ್ಷಿಸುತ್ತಾರೆ. ಮದಕರಿ ನಾಯಕರಂತೆ ಅವರ ಜೊತೆಗಿದ್ದ ಸೈನ್ಯವೂ ಕೂಡ ಎದುರಾಳಿಗಳ ಎದೆ ನಡಗಿಸುತ್ತಿತ್ತು. ತ.ರ.ಸು ಅವರು ತಮ್ಮ ‘ದುರ್ಗಾಸ್ತಮಾನ’ ಕಾದಂಬರಿಯಲ್ಲಿ ದುರ್ಗದ ಐತಿಹಾಸಿಕ ಘಟನೆಗಳನ್ನು ಕಣ್ಣಿಗೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಸ್ಮರಿಸಿಕೊಂಡರು.ಮುಖಂಡ ತುಂಬಿನಕೆರೆ ಬಸವರಾಜ್ ಮಾತನಾಡಿ, ಶೌರ್ಯ ಮತ್ತು ಧೈರ್ಯಕ್ಕೆ ಹೆಸರಾಗಿದ್ದ ಮದಕರಿ ನಾಯಕರು ಹೊಸದುರ್ಗ ತಾಲೂಕಿನಲ್ಲಿ ಜನಿಸಿದ್ದರು ಎಂಬುದೇ ಹೆಮ್ಮೆಯ ವಿಷಯ. ಹಿಂದೆ ನಾಯಕರು ತಮ್ಮ ಪ್ರಜೆಗಳ ರಕ್ಷಣೆಗಾಗಿ ಖಡ್ಗ ಹಿಡಿದು ಯುದ್ಧ ಮಾಡುತ್ತಿದ್ದರು. ಆದರಿಂದು ಖಡ್ಗ ಹಿಡಿಯುವ ಅವಶ್ಯಕತೆಯಿಲ್ಲ. ನಮ್ಮ ಮಕ್ಕಳು ಪೆನ್ನು ಹಿಡಿದು ಪರೀಕ್ಷೆಯಲ್ಲಿ ಯುದ್ಧ ಮಾಡಿ, ಗೆದ್ದು ಬರುವಂತೆ ನಾವೆಲ್ಲರೂ ಅವರಿಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.
ಈ ವೇಳೆ ತಾಲೂಕು ನಾಯಕ ಸಮಾಜದ ಕಾರ್ಯದರ್ಶಿ ವೆಂಗಳಾಪುರ ರಂಗನಾಥ್, ಖಜಾಂಚಿ ಹುಣವಿನಡು ಜಯಣ್ಣ, ಜಿಪಂ ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್, ಮುಖಂಡರಾದ ಗುತ್ತಿಕಟ್ಟೆ ಕೆಂಚಪ್ಪ, ರೊಪ್ಪ ಹನುಮಂತಪ್ಪ, ಹೇರೂರು ರಂಗಪ್ಪ, ಮಳಲಿ ತಿಪ್ಪೇರುದ್ರಪ್ಪ, ರಂಗಾಪುರ ಶೇಖರಪ್ಪ, ಸೋಡರನಾಳು ಶಿವರುದ್ರಪ್ಪ, ಬೋಕಿಕೆರೆ ಏಕಾಂತಪ್ಪ, ಕೊಂಡಜ್ಜಿ ಮಹೇಶ್, ಮಳಲಿ ವಿಜಯ್ ಕುಮಾರ್, ಯುವ ಮುಖಂಡರಾದ ಅರುಣ್ ಗಂಗಾಧರಪ್ಪ, ಹುಣವಿನಡು ಶಿವರಾಜ್, ಕೋಡಿಹಳ್ಳಿ ಯುವರಾಜ್, ಕರ್ಣ ಪಾಳೇಗಾರ್ ಮತ್ತು ಮನು ಸೇರಿದಂತೆ ಇತರಿದ್ದರು.ಇದೆ ಸಂದರ್ಭದಲ್ಲಿ ಇತ್ತೀಚೆಗಷ್ಟೇ ನಿಧನರಾದ ತಾಲೂಕು ನಾಯಕ ಸಮಾಜದ ಅಧ್ಯಕ್ಷರಾಗಿದ್ದ ಕೆ.ಟಿ.ರಂಗನಾಥ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಆತ್ಮಕ್ಕೆ ಶಾಂತಿ ಕೋರಲಾಯಿತು.