ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಬೆಳೆ ಸಮೀಕ್ಷೆಗಾರ ಸಂಘ ಜಿಲ್ಲಾ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಪರ ಜಿಲ್ಲಾಧಿಕಾರಿ ಕಚೇರಿಗೆ ರಾಜ್ಯ ಬೆಳೆ ಸಮೀಕ್ಷೆಗಾರ ಸಂಘ ಜಿಲ್ಲಾ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ತೆರಳಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಅವರಿಗೆ ಮನವಿ ಸಲ್ಲಿಸಿದರು.ಕಳೆದ 8 ವರ್ಷಗಳಿಂದ ಪೂರ್ವ ಮುಂಗಾರು, ಮುಂಗಾರು, ಹಿಂಗಾರು, ಬೇಸಿಗೆ ಋತುಗಳಲ್ಲಿ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಬೆಳೆ ಸಮೀಕ್ಷೆಗಾರರಿಗೆ 2024ನೇ ಸಾಲಿನವರಗೆ ಕೃಷಿ ಇಲಾಖೆಯಿಂದ ಐಡಿ ಕಾರ್ಡ್ ವಿತರಣೆ ಮಾಡಲಾಗಿದ್ದು, ಅವಧಿ ಮುಗಿದಿದ್ದು, ಪ್ರಸಕ್ತ ವರ್ಷಕ್ಕೆ ಐಡಿ ಕಾರ್ಡ್ ವಿತರಣೆ ಮಾಡಬೇಕು, ಮಳೆಗಾಲದಲ್ಲಿ ಸಮೀಕ್ಷೆ ಮಾಡಲು ಮಳೆಯಿಂದ ಸುರಕ್ಷತೆಗೆ ಕೃಷಿ ಇಲಾಖೆಯ ಲೋಗೋ ಇರುವ ರೈನ್ ಕೋಟ್, ಕ್ಯಾಪ್, ಬ್ಯಾಗ್ ನೀಡಬೇಕು ಎಂದು ಮನವಿ ಮಾಡಿದರು.
ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಕಾಡು ಪ್ರಾಣಿಗಳು, ಕ್ರಿಮಿ ಕೀಟಗಳು, ಹಾವುಗಳಿಂದ ಅಥವಾ ಬೆಳೆ ರಕ್ಷಣೆಗೆ ಹಾಕಿರುವ ವಿದ್ಯುತ್ ಹಾಗೂ ಸೋಲಾರ್ ತಂತಿ ಬೇಲಿಯಿಂದ ಅನಾಹುತಗಳಾಗಿದರೆ ವೈದ್ಯಕೀಯ ವೆಚ್ಚವನ್ನು ಹಾಗೂ ಸಾವನ್ನಪ್ಪಿದರೆ ಕುಟುಂಬಕ್ಕೆ 50 ಲಕ್ಷ ರು. ಪರಿಹಾರ ಮತ್ತು ಬೆಳೆ ಸಮೀಕ್ಷೆದಾರರ ಕುಟುಂಬಕ್ಕೆ ಕನಿಷ್ಠ ತಿಂಗಳಿಗೆ 10 ಸಾವಿರ ರು. ಪಿಂಚಣಿ ನೀಡುವುದಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಬೆಳೆ ಸಮೀಕ್ಷೆ ಆ್ಯಪ್ ರೀತಿಯೇ ಮಣ್ಣು ಪರೀಕ್ಷೆ ಆ್ಯಪ್ ಸಹ ಇದ್ದು, ಬೆಳೆ ಸಮೀಕ್ಷೆಗಾರರಿಗೆ ಬೆಳೆ ಸಮೀಕ್ಷೆ ನಡೆಸುವ ಗ್ರಾಮದಲ್ಲಿ ಮಣ್ಣು ಸಂಗ್ರಹ ಕೆಲಸವನ್ನು ಸಹ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಸಿ. ಮನೋಜ್ ಕುಮಾರ್, ಖಜಾಂಚಿ ಮಧು, ಕಾರ್ಯದರ್ಶಿ ಸುರೇಶ್ ಹರದನಹಳ್ಳಿ, ಸದಸ್ಯರಾದ ಅಕ್ಷಯ್ ಕುಮಾರ್, ಮಾದಪುರ ದಾಸ್‌ಪ್ರಕಾಶ್, ಉಡಿಗಾಲ ಹೇಮಂತ್ ಕುಮಾರ್, ಹಂಡ್ರಕಳ್ಳಿ ರವಿ ಇದ್ದರು.