ಕನ್ನಡಪ್ರಭ ವಾರ್ತೆ ಬೆಂಗಳೂರು

‘ಕನಕಪುರದವರು ಬಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗುತ್ತಾರೆ. ತುಮಕೂರಿನವರು ಬಂದು ಸಚಿವರಾಗುತ್ತಾರೆ. ಆದರೆ, ಬೆಂಗಳೂರಿನವರನ್ನು ಬೆಂಗಳೂರು ರಾಜಕಾರಣದಿಂದ ದೂರ ಇಟ್ಟಿದ್ದಾರೆ. ನನಗೆ ಯಾವ ಸಚಿವ ಸ್ಥಾನವೂ ಬೇಡ, ಈಗಲೇ ರಾಜೀನಾಮೆ ಕೊಡಿ ಎಂದರೂ ಕೊಡುತ್ತೇನೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಮತ್ತೆ ರೆಬೆಲ್‌ ಆಗಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ಬದಲಿಗೆ ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಸಿಡಿದೆದ್ದಿದ್ದ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರ ಮನವೊಲಿಕೆ ಪ್ರಯತ್ನದ ನಂತರ ಅತೃಪ್ತಿ ಶಮನವಾಗಿದೆ ಎಂದು ಹೇಳಲಾಗಿತ್ತು. ಆದರೆ ಭಾನುವಾರ ಮತ್ತೊಮ್ಮೆ ಅವರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

‘ಖಾತೆಗಳು ಕೂಡ ದೆಹಲಿಯಲ್ಲೇ ತೀರ್ಮಾನ ಆಗುತ್ತವೆ. ನಾನು ದೆಹಲಿಗೆ ಹೋಗಿಲ್ಲ, ಯಾರ ಬಳಿಯೂ ಖಾತೆ ಕೇಳಿಲ್ಲ. ನನಗೆ ಹೈಕಮಾಂಡ್‌ ಏನೂ ಕೇಳಿಲ್ಲ, ನಾನೂ ಏನೂ ಕೇಳಲು ಹೋಗಿಲ್ಲ. ಲಾಬಿ ಮಾಡಿ ಪಡೆಯುವ ಯಾವ ಸಚಿವ ಸ್ಥಾನವೂ ನನಗೆ ಬೇಡ ಎಂದು ಸ್ಪಷ್ಟಪಡಿಸಿದರು.

ಇದ್ದಷ್ಟು ದಿನ ಇರ್ತೇನೆ ಅಷ್ಟೇ!


‘ನಾನು ಯಾರ ಮನೆ ಬಾಗಿಲಿಗೂ ಹೋಗಿ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ. ಅಥವಾ ದೆಹಲಿಗೆ ಹೋಗಿ ಲಾಬಿಯನ್ನೂ ಮಾಡಿದವನಲ್ಲ. ಇಂತಹದ್ದೇ ಖಾತೆಯೇ ಕೊಡಿ ಎಂದೂ ಕೇಳಿದವನೂ ಅಲ್ಲ. ನನಗೆ ಕೊಟ್ಟಿದ್ದನ್ನೂ ವಾಪಸು ತೆಗೆದುಕೊಂಡಿದ್ದಾರೆ. ಹೀಗಾಗಿ ಬೇಸರವಾಗಿದೆ. ಈಗ ಯಾವುದೋ ಒಂದು ಖಾತೆ ಕೊಟ್ಟಿದ್ದಾರಷ್ಟೆ. ನಾನು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಇದ್ದಷ್ಟು ದಿನ ಇರ್ತೇನೆ ಅಷ್ಟೇ’ ಎಂದು ರಾಮಲಿಂಗಾರೆಡ್ಡಿ ಸೂಕ್ಷ್ಮ ಹೇಳಿಕೆ ನೀಡಿದ್ದಾರೆ.

ಶಾಸಕ ಸ್ಥಾನ ಇಲ್ಲದಿದ್ದರೂ ಏನೂ ಆಗಲ್ಲ:ನನಗೆ ಸಚಿವ ಸ್ಥಾನ ಇಲ್ಲದಿದ್ದರೂ ಏನಾಗುವುದಿಲ್ಲ. ಶಾಸಕನೇ ಅಲ್ಲದಿದ್ದರೂ ಏನೂ ಆಗುವುದಿಲ್ಲ. ನನಗೆ ಬೆಂಗಳೂರು ರಾಜಕೀಯವೂ ಬೇಕಾಗಿಲ್ಲ. ಬೆಂಗಳೂರಿನವರನ್ನು ಬೆಂಗಳೂರು ರಾಜಕಾರಣದಿಂದ ದೂರ ಇಟ್ಟಿದ್ದಾರೆ. ನನಗೆ ಬೇರೆ ಯಾವ ಖಾತೆಯೂ ಬೇಕಾಗಿಲ್ಲ ಎಂದು ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಯಾರಿಗೂ ಬೇಡವಾದ ಖಾತೆ ನನಗೆ ನೀಡಿದ್ದರು:

ಹಿಂದಿನ ಸಂಪುಟದಲ್ಲೂ ಮುಜರಾಯಿ ಖಾತೆ ಯಾರೂ ತೆಗೆದುಕೊಂಡಿಲ್ಲ. ಅದನ್ನು ನನಗೆ ಕೊಟ್ಟರು. ಅದರಲ್ಲಿ ನಾನು ಹೆಸರು ಮಾಡಿಲ್ಲವೇ? ಬರೀ ಸಾಲದಿಂದ ತುಂಬಿದ್ದ ಸಾರಿಗೆಯನ್ನು ಚೆನ್ನಾಗಿ ನಡೆಸಿಲ್ಲವೇ? ಸಾರಿಗೆ ಇಲಾಖೆಗೆ 400ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳು ಬಂದವು. ಹೀಗಿದ್ದರೂ ನಾನೇಕೆ ಇಂತಹದ್ದೇ ಖಾತೆ ಬೇಕು ಎಂದು ಕೇಳಲಿ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.