ಸಾರಾಂಶ
ಅನುದಾನ ಬಿಡುಗಡೆಯಾದರೂ ಆಗದ ಚರಂಡಿ, ರಸ್ತೆ ಕಾಮಗಾರಿ । ನಗರಸಭೆ ಎದುರು ಧರಣಿ । ಅಧಿಕಾರಿಗಳ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ ಹಾಸನನಗರದ ಅರಳೇಪೇಟೆ ರಸ್ತೆ ಮತ್ತು ಗಾಣಿಗರ ಬೀದಿ ಮಧ್ಯೆ ಇರುವ ರಂಗಾಚಾರ್ ಗಲ್ಲಿಯ ಯುಜಿಡಿ ದುರಸ್ತಿ, ರಸ್ತೆ ಸರಿಪಡಿಸಲು ಕಾಮಗಾರಿಗೆ ಹಣ ಬಿಡುಗಡೆಯಾದರೂ ಕೂಡ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಲ್ಲಿನ ಸುತ್ತಮುತ್ತ ನಿವಾಸಿಗಳೂ ಪ್ರತಿನಿತ್ಯ ನರಕಯಾತನೆ ಅನುಭವಿಸಬೇಕಾಗಿದೆ. ಇನ್ನೊಂದು ವಾರದಲ್ಲಿ ಸಮಸ್ಯೆ ಸರಿಪಡಿಸದಿದ್ದರೆ ನಗರಸಭೆ ಮುಂದೆ ನಿವಾಸಿಗಳೆಲ್ಲಾ ಸೇರಿ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
೧೯ನೇ ವಾರ್ಡಿನ ನಿವಾಸಿ ಮಾಲಾ ಹಾಗೂ ನಿವಾಸಿಗಳು ಮಾಧ್ಯಮದೊಂದಿಗೆ ಮಾತನಾಡಿ, ‘೧೯ನೇ ವಾರ್ಡಿನ ನಗರದ ಉತ್ತರ ಬಡಾವಣೆ ಸರ್ಕಾರಿ ಶಾಲೆ ಬಳಿ ಅರಳೇಪೇಟೆ ರಸ್ತೆ ಹಾಗೂ ಗಾಣಿಗರ ಬೀದಿ ಮಧ್ಯೆ ಇರುವ ರಂಗಾಚಾರ್ ಗಲ್ಲಿಯಲ್ಲಿ ಯುಜಿಡಿ ಸಮಸ್ಯೆ, ರಸ್ತೆ ಸಮಸ್ಯೆ, ಕಸ ತುಂಬಿದ ಸಮಸ್ಯೆಯಿಂದ ಪ್ರತಿನಿತ್ಯ ನರಕ ಯಾತನೆಯನ್ನು ಇಲ್ಲಿನ ನಿವಾಸಿಗಳು ಅನುಭವಿಸಬೇಕಾಗಿದೆ. ಇಲ್ಲಿನ ಜನರ ಗೋಳನ್ನು ಯಾರು ಕೇಳುವವರಿಲ್ಲ’ ಎಂದು ದೂರಿದರು.‘ಯುಜಿಡಿ ತುಂಬಿಕೊಂಡು ೬ ತಿಂಗಳೇ ಕಳೆದು ಹೋಗಿದೆ. ಮಳೆ ಬಂದರೆ ಮನೆಗೆ ಯುಜಿಡಿ ನೀರು ಹರಿಯುತ್ತದೆ. ಈ ಬಗ್ಗೆ ನಗರಸಭೆಗೆ ಮನವಿ ನೀಡಿ ಮೂರು ತಿಂಗಳಾಗಿದೆ. ಕಾಮಗಾರಿಗೆ ಒಪ್ಪಿಗೆ ದೊರಕಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ನಡೆಯುತ್ತಿಲ್ಲ. ಇಲ್ಲಿನ ನಿವಾಸಿಗಳು ಅನೇಕ ಬಾರಿ ನಗರಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಮನವಿ ಮಾಡುತ್ತಿರುವ ಹಿನ್ನೆಲೆ ಎರಡು ದಿವಸ ಬಂದು ರಸ್ತೆ ಹಗೆದು ಹೋದವರು ಮತ್ತೆ ಇತ್ತ ಕಡೆ ಸುಳಿಯಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕೊಳಚೆ ನೀರು ಹರಿಯುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅನೇಕರಿಗೆ ಡೆಂಘೀ ಜ್ವರ ಬಂದಿದೆ. ಅನೇಕ ರೋಗಗಳು ಸಂಭವಿಸುತ್ತಿದೆ. ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದು ಕೂಡಲೇ ಸರಿಪಡಿಸದಿದ್ದರೆ ನಗರಸಭೆ ಮುಂದೆ ನಿವಾಸಿಗಳೆಲ್ಲಾ ಸೇರಿ ಪ್ರತಿಭಟನೆ ಮಾಡಬೇಕಾಗದ ಅನಿವಾರ್ಯತೆ ಬರುತ್ತದೆ’ ಎಂದು ಎಚ್ಚರಿಸಿದರು.ನಿವಾಸಿ ಲಕ್ಷ್ಮಿ ಮಾಧ್ಯಮದೊಂದಿಗೆ ಮಾತನಾಡಿ, ‘ಸುಮಾರು ವರ್ಷಗಳಿಂದ ರಂಗಾಚಾರ್ ಗಲ್ಲಿಯಲ್ಲಿ ಹಲವಾರು ಕುಟುಂಬಗಳು ವಾಸವಿದ್ದು, ಈ ಗಲ್ಲಿಯಲ್ಲಿ ಡ್ರೈನೇಜ್ ದುರಸ್ತಿಯಲ್ಲಿದ್ದು, ಪದೇ ಪದೇ ಡ್ರೈನೇಜ್ ಚೇಂಬರ್ ಭರ್ತಿಯಾಗಿ ಮತ್ತು ಡ್ರೈನೇಜ್ ನೀರು ಕೊಳವೆಬಾವಿ ನೀರಿಗೆ ಸೇರುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಪೈಪ್‌ಲೈನ್ ಅನ್ನು ವಿಧಾನಸಭಾ ಚುನಾವಣಾ ಪೂರ್ವದಲ್ಲಿಯೇ ಬದಲಿಸುವುದಾಗಿ ಭರವಸೆ ನೀಡಿದರು. ಚುನಾವಣೆ ಕಳೆದು ವರ್ಷಗಳು ಉರುಳಿದರೂ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವಾಸಿಗಳಾದ ಎಚ್.ಎಂ.ಸರಸ್ವತಿ, ಎ.ಎಂ.ದೇವಿಕಾಂಬ, ಲತಾ, ಧನಲಕ್ಷ್ಮಿ, ಲಕ್ಷ್ಮೀಶ್, ವರಲಕ್ಷ್ಮಿ, ಮನು, ಕುಕ್ಕೇಶ್ರೀ ಇದ್ದರು.