ಸಾರಾಂಶ
ಭಾನುವಳ್ಳಿಯ ಮದಕರಿ ನಾಯಕ ಮಹಾದ್ವಾರದ ಪಕ್ಕದಲ್ಲೇ ಅನಧಿಕೃತವಾಗಿ ಪ್ರತಿಷ್ಠಾಪಿರುವ ಪ್ರತಿಮೆ ತೆರವುಗೊಳಿಸುವ ಸಂಬಂಧ ಈಗಾಗಲೇ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ ಎಂದು ಕೆ.ಆರ್.ರಂಗಪ್ಪ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪನೆ ಮಾಡಿರುವ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ತೆರವುಗೊಳಿಸದಿದ್ದರೆ ಎಕ್ಕೆಗೊಂದಿ-ನಂದಿಗುಡಿ ರಸ್ತೆಯನ್ನು ಬಂದ್ ಮಾಡಲಾಗುವುದೆಂದು ಹರಿಹರ ಗ್ರಾಮಾಂತರ ವಾಲ್ಮೀಕಿ ನಾಯಕ ಟ್ರಸ್ಟ್ ಅಧ್ಯಕ್ಷ ಕೆ.ಆರ್.ರಂಗಪ್ಪ ತಿಳಿಸಿದರು.ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾನುವಳ್ಳಿ ಗ್ರಾಮದ ಮದಕರಿ ನಾಯಕ ಮಹಾದ್ವಾರದ ಪಕ್ಕದಲ್ಲೇ ಅನಧಿಕೃತವಾಗಿ ಪ್ರತಿಷ್ಠಾಪಿ ರುವ ಪ್ರತಿಮೆ ತೆರವುಗೊಳಿಸುವ ಸಂಬಂಧ ಈಗಾಗಲೇ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ.
ತಹಸೀಲ್ದಾರ್, ಉಪ ವಿಬಾಗಾಧಿಕಾರಿ, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿಗಳು ನಮಗೆ ಭರವಸೆ ನೀಡಿದಂತೆ ಜ.೨೨ಕ್ಕೆ ೧೦ ದಿನವಾಗುತ್ತದೆ. ಸಮಸ್ಯೆ ಪರಿಹರಿಸದಿದ್ದರೆ ಜ.೨೩ರಂದು ಬೆಳಿಗ್ಗೆ ೮.೩೦ ರಿಂದ ಎಕ್ಕೆಗೊಂದಿ-ನಂದಿಗುಡಿ ರಸ್ತೆಯನ್ನು ಬಂದ್ ಮಾಡಲಾಗುವುದೆಂದು ಹೇಳಿದರು.ವಾಲ್ಮೀಕಿ ಗುರುಪೀಠದ ಟ್ರಸ್ಟಿ ಕೆ.ಬಿ.ಮಂಜುನಾಥ ಮಾತನಾಡಿ, ಗ್ರಾಮದ ಮದಕರಿ ಮಹಾದ್ವಾರದಲ್ಲಿ ಕಳೆದ ೧೨ ದಿನಗಳಿಂದ ಗ್ರಾಮದ ವಾಲ್ಮೀಕಿ ಸಮಾಜದವರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ, ಸದರಿ ಧರಣಿ ಸತ್ಯಾಗ್ರಹ ಶಿಬಿರದಲ್ಲಿಟ್ಟಿದ್ದ ಡಾ.ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಇವರ ಭಾವಚಿತ್ರವನ್ನು ಯಾರೋ ಕಿಡಿಗೇಡಿಗಳು ಕದ್ದಿದ್ದಾರೆ. ಆ ಕಿಡಿಗೇಡಿಗಳನ್ನು ಬಂಧಿಸಲು ಮಲೆಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಈವರೆಗೆ ಕಿಡಿಗೇಡಿಗಳ ಬಂಧನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ಸಮುದಾಯದ ಮುಖಂಡರಾದ ದೇವರಬೆಳೆಕೆರೆ ಚಂದ್ರಪ್ಪ, ಜಿಗಳಿ ಆನಂದಪ್ಪ, ಹನಗವಾಡಿ ಹನುಮಂತಪ್ಪ, ಆಟೋ ರಾಜು, ಕೆ.ಬೇವಿನಹಳ್ಳಿ ಹಾಲೇಶ್ ಕುಮಾರ್, ಟಿ.ಪುಟ್ಟಪ್ಪ ಭಾನುವಳ್ಳಿ, ಬಿ.ಎ.ಮಂಜಪ್ಪ, ಶ್ರೀಕಾಂತ್ ನಂದಿಗುಡಿ, ಡಿ.ಹನುಮಂತಪ್ಪ ಹಾಗೂ ಇತರರಿದ್ದರು.