ಸಾರಾಂಶ
ಬ್ರೀಜ್ ಕಮ್ ಬ್ಯಾರೇಜ್ ಶಂಕುಸ್ಥಾಪನೆ, ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ನೆರವೇರಿಸಿದ ಸಚಿವ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶಾಸಕ ಬಸವರಾಜ ರಾಯರಡ್ಡಿ ಸಾಕಷ್ಟು ಕಳಕಳಿ, ಕಾಳಜಿ ಇಟ್ಟುಕೊಂಡು ಮೂರು ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕುಕನೂರಿಗೆ ೧೦೦ ಹಾಸಿಗೆ ಆಸ್ಪತ್ರೆ ಮಂಜೂರಾತಿ ಮಾಡಿಸಿಕೊಳ್ಳುವಲ್ಲಿ ಹೆಚ್ಚು ಪರಿಶ್ರಮ ವಹಿಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.ತಾಲೂಕಿನ ಬಂಡಿ ಗ್ರಾಮದಲ್ಲಿ ಬುಧವಾರ ಬ್ರೀಜ್ ಕಮ್ ಬ್ಯಾರೇಜ್ ಶಂಕುಸ್ಥಾಪನೆ ಹಾಗೂ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ರಾಯರಡ್ಡಿಯವರು ಈ ಭಾಗದಲ್ಲಿ ಬಡಮಕ್ಕಳ ಶಿಕ್ಷಣಕ್ಕಾಗಿ ಎಂಜಿನಿಯರಿಂಗ್ ಕಾಲೇಜು, ವಸತಿ ಶಾಲೆಗಳು, ಆರೋಗ್ಯ ಕೇಂದ್ರ ಸ್ಥಾಪಿಸುವುದು ಸೇರಿದಂತೆ ರೈಲ್ವೆ ಮಾರ್ಗ, ಹೆದ್ದಾರಿ ರಸ್ತೆ ಅಭಿವೃದ್ಧಿ ಪಡಿಸುವ ಮೂಲಕ ಅಭಿವೃದ್ಧಿ ಕಾರ್ಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಇಂತಹ ಶಾಸಕ ಕ್ಷೇತ್ರದ ಜನತೆಗೆ ದೊರೆತಿರುವುದು ನಿಮ್ಮೆಲ್ಲರ ಸೌಭಾಗ್ಯ ಎಂದರು.
ರಾಯರಡ್ಡಿಯವರು ಕೇಳಿದ್ದನ್ನು ನಾವು ಕೊಡದೆ ಹೋದರೆ ನಮ್ಮ ಕೆಲಸ ಆಗುವುದಿಲ್ಲ. ಏಕೆಂದರೆ ಅವರು ಸಿಎಂ ಆರ್ಥಿಕ ಸಲಹೆಗಾರರಾಗಿರುವುದರಿಂದ ಮೊದಲು ಅವರಿಗೆ ಆದ್ಯತೆ ಕೊಡುತ್ತೇವೆ. ಅವರು ನಮಗಿಂತಲೂ ಹಿರಿಯ ರಾಜಕಾರಣಿ, ಸಿಎಂ ಆಪ್ತರು. ಹೀಗಾಗಿ ಕುಕನೂರಿಗೆ ₹೪೨ಕೋಟಿ ವೆಚ್ಚದಲ್ಲಿ ೧೦೦ ಹಾಸಿಗೆಯ ಆಸ್ಪತ್ರೆ ಮಂಜೂರು ಮಾಡಲಾಗಿದೆ. ತ್ವರಿತವಾಗಿ ಶಂಕುಸ್ಥಾಪನೆ ಹಾಗೂ ಮುಂದಿನ ವರ್ಷ ೨೦೨೬ಕ್ಕೆ ನಮ್ಮ ಸರ್ಕಾರ ಇರುವಾಗಲೇ ಅದರ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಒಂದುವರೆ ವರ್ಷದಲ್ಲಿ ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಜನಪರ ಯೋಜನೆ ಜಾರಿಗೆ ತರುವಲ್ಲಿ ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ನಿಜಕ್ಕೂ ನನ್ನ ಪಾಲಿನ ದೇವರು. ಅವರಿಗೆ ಸದಾ ಚಿರಾಋಣಿಯಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿಧ್ದೇನೆ ಎಂದು ಹೇಳಿದರು.
ಈ ಸಂದರ್ಭ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅಧ್ಯಕ್ಷ ಹಸನಸಾಬ ದೋಟಿಹಾಳ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ವಣಗೇರಿ, ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ, ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ಬಿ.ಎಂ. ಶಿರೂರ, ರಾಮಣ್ಣ ಸಾಲಭಾವಿ, ಸಂಗಣ್ಣ ಟೆಂಗಿನಕಾಯಿ, ಡಾ. ಶಿವನಗೌಡ ದಾನರಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿಂಗರಾಜ ಮತ್ತಿತರರು ಇದ್ದರು.