ತುಂಗಾನದಿಯ ಪಾವಿತ್ರ್ಯ ಕಾಪಾಡುವುದು ಎಲ್ಲರ ಹೊಣೆ

| Published : Oct 24 2024, 12:52 AM IST

ತುಂಗಾನದಿಯ ಪಾವಿತ್ರ್ಯ ಕಾಪಾಡುವುದು ಎಲ್ಲರ ಹೊಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪೂರ್ವಭಾವಿ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಕಲುಷಿತಗೊಳ್ಳುತ್ತಿರುವ ತುಂಗಾನದಿ ಪಾವಿತ್ರತೆ ಕಾಪಾಡುವ ಸಲುವಾಗಿ ಶೃಂಗೇರಿಯಿಂದ ನ.6ಕ್ಕೆ ಹೊರಡುವ ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ಎಲ್ಲರೂ ಸೇರಿ ಜನಜಾಗೃತಿ ಮೂಡಿಸಲು ಶ್ರಮಿಸೋಣ ಎಂದು ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದರು.

ನ.8ರಂದು ತಾಲೂಕಿಗೆ ಆಗಮಿಸುವ ನಿರ್ಮಲ ತುಂಗಭದ್ರಾ ಅಭಿಯಾನವನ್ನು ಸ್ವಾಗತಿಸುವ ಕುರಿತಂತೆ ಗ್ರಾಮೀಣ ಭವನದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನ.7 ರಂದು ತಾಲೂಕಿಗೆ ಆಗಮಿಸುವ ಅಭಿಯಾನ ಮೂರು ದಿನಗಳ ಕಾಲ ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.

ಜೀವನದಿಯಾದ ತುಂಗಾನದಿಯ ಶುದ್ಧೀಕರಣದ ಸಲುವಾಗಿ ನಡೆಯುವ ಕಾರ್ಯದಲ್ಲಿ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಈ ಬಗ್ಗೆ ಎಲ್ಲರನ್ನೂ ಒಳಗೊಂಡ ಒಂದು ಸ್ವಾಗತ ಸಮಿತಿಯನ್ನು ರಚಿಸಲಾಗುವುದು ಎಂದೂ ಹೇಳಿದರು.

ನದಿಗಳು ಕಲುಷಿತಗೊಳ್ಳುತ್ತಿರುವ ಬಗ್ಗೆ ವಿವರವಾಗಿ ಸಭೆಗೆ ಮನವರಿಕೆ ಮಾಡಿದ ಪರಿಸರವಾದಿ ಪ್ರೊ.ಬಿ.ಎಂ.ಕುಮಾರಸ್ವಾಮಿ, ಅಗಾಧ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವ ನದಿಯ ನೀರಿನಿಂದ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿರುವುದು ಮಾತ್ರವಲ್ಲದೇ, ನದಿಗಳು ಸಾಯುವ ಸ್ಥಿತಿ ತಲುಪಿವೆ. ನದಿಗಳನ್ನು ಉಳಿಸಿ ಅವುಗಳ ಪಾವಿತ್ರ್ಯತೆಯನ್ನು ಕಾಪಾಡಲು ಜನಜಾಗೃತಿ, ಜಲಜಾಗೃತಿಯೊಂದಿಗೆ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಿದೆ ಎಂದು ಹೇಳಿದರು.

ಅಭಿಯಾನದ ಸಂಘಟಕರಾದ ಗಿರೀಶ ಪಟೇಲ್ ಮಾತನಾಡಿ, ಗಂಗಾನದಿ ಶುದ್ಧೀಕರಣದ ರೀತಿ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಪ್ರೇರಣೆಯಿಂದ ನಿರ್ಮಲ ತುಂಗಭದ್ರಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಪ್ರಮುಖವಾಗಿ ಯುವ ಜನತೆ ಸೇರಿದಂತೆ ಇಡೀ ಸಮಾಜ ಒಳಗೊಳ್ಳಬೇಕು ಎಂದು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿದರು. ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ತಹಸೀಲ್ದಾರ್ ಎಸ್. ರಂಜಿತ್, ತಾಪಂ ಇಒ ಎಂ. ಶೈಲಾ ಸೇರಿದಂತೆ ತಾಲೂಕಿನ ಸರ್ಕಾರಿ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಸಾರ್ವಜನಿಕರು ಇದ್ದರು.