ಸುಮಲತಾ ಅಂಬರೀಶ್ ಅವರು ಸಂಸದೆಯಾಗಿದ್ದಾಗಲೇ ಅನುದಾನ ಮಂಜೂರಾಗಿತ್ತು. ಆದರೆ, ತಮಿಳು ಕಾಲೋನಿ ತೆರವು ವಿವಾದ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಆಗಲಿರಲಿಲ್ಲ. ಇದೀಗ ಕೇಂದ್ರದ ಪ್ರಭಾವಿ ಸಚಿವ ಕುಮಾರಸ್ವಾಮಿ ಅವರು ಜಾಗ ಕೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ನಿರ್ಮಿಸಲು ಸ್ಥಳ ಕೇಳಿದ್ದು, ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ (ಡಿಎಚ್‌ಒ) ಕಚೇರಿಯ ಜಾಗವನ್ನೇ ಕೊಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ತುರ್ತು ಮತ್ತು ಸುಧಾರಿತ ವೈದ್ಯಕೀಯ ಸೇವೆಗಾಗಿ ಪ್ರಧಾನಮಂತ್ರಿ ಆರೋಗ್ಯ ಸುರಕ್ಷಾ ಯೋಜನೆಯಡಿ (ಪಿಎಂಎಸ್‌ಎಸ್‌ವೈ) ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಂದಾಗಿರುವುದು ಸ್ವಾಗತಾರ್ಹ ಎಂದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ನಿರ್ಮಿಸುವುದು ಕೇವಲ ಮಾತು ಮತ್ತು ಪತ್ರ ವ್ಯವಹಾರಕ್ಕೆ ಸೀಮಿತವಾಗಬಾರದು. ಕೇಂದ್ರದಿಂದ ಅನುದಾನ ತಂದು ಉದ್ದೇಶಿತ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.

ಸುಮಲತಾ ಅಂಬರೀಶ್ ಅವರು ಸಂಸದೆಯಾಗಿದ್ದಾಗಲೇ ಅನುದಾನ ಮಂಜೂರಾಗಿತ್ತು. ಆದರೆ, ತಮಿಳು ಕಾಲೋನಿ ತೆರವು ವಿವಾದ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಆಗಲಿರಲಿಲ್ಲ. ಇದೀಗ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಕುಮಾರಸ್ವಾಮಿ ಅವರು ಜಾಗ ಕೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ನಾವೂ ಕೂಡ ಡಿಎಚ್‌ಒ ಕಚೇರಿ ಜಾಗ ಕೊಡುವುದಾಗಿ ಇಂದು ಎಚ್‌ಡಿಕೆ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ನಗರದ ಡಿಎಚ್‌ಒ ಕಚೇರಿ ಆವರಣವು ಸುಮಾರು 2 ಎಕರೆಯಷ್ಟು ವಿಸ್ತೀರ್ಣವಿದೆ. ಆ ಜಾಗದಲ್ಲಿ ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬಹುಮಹಡಿ ಕಟ್ಟಡಗಳನ್ನು ಕಟ್ಟಿದರೆ ಅದರಲ್ಲೇ ಡಿಎಚ್‌ಒ ಕಚೇರಿಗೂ ಸ್ಥಳಾವಕಾಶ ಮಾಡಿಕೊಡಲಾಗುವುದು. ಅದು ಸಾಧ್ಯವಾಗದಿದ್ದರೆ ನಗರದೊಳಗೆ ಬೇರೆ ಜಾಗವನ್ನು ದೊರಕಿಸಿಕೊಡಲಾಗುವುದು ಎಂದರು.

ತಮಿಳುಕಾಲೋನಿ ತೆರವಿಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವಿಗೆ ಕ್ರಮ ವಹಿಸಲಾಗಿದೆ. ತಮಿಳು ಕಾಲೋನಿ ನಿವಾಸಿಗಳಿಗಾಗಿ ನಿರ್ಮಿಸಿದ್ದ ಮನೆಗಳಲ್ಲಿ ಯಾರೂ ವಾಸವಿಲ್ಲದೆ ಹಾಳಾಗುತ್ತಿವೆ. ಹೀಗಾಗಿ ಮನೆಗಳ ಹಂಚಿಕೆ ಮಾಡಲು ಅಥವಾ ಬೇರೆಯವರಿಗೆ ಕೊಡಲು ಅನುಮತಿ ನೀಡುವಂತೆ ನ್ಯಾಯಲಯಕ್ಕೆ ಮನವಿ ಮಾಡಲಾಗುವುದು ಎಂದರು.

ತಮಿಳು ಕಾಲೋನಿ ತೆರವಿಗೆ ಸದ್ಯಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಕೋರ್ಟ್ ನೆಪವಿಟ್ಟುಕೊಂಡು ಜಾಗವಿಲ್ಲ ಇಲ್ಲ ಎನ್ನುವುದಿಲ್ಲ. ಅಗತ್ಯ ಜಾಗ ಕೊಡುವುದಾಗಿ ಎಚ್‌ಡಿಕೆ ಅವರಿಗೆ ಜಿಲ್ಲಾಡಳಿತದಿಂದಲೂ ಅಧಿಕೃತ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗೂ ಲಿಖಿತ ಮನವಿ ಮಾಡಿದ್ದೇನೆ ಎಂದು ಪತ್ರಗಳನ್ನು ಪ್ರದರ್ಶಿಸಿದರು.

ಕೈಗಾರಿಕೆ ಸ್ಥಾಪನೆಗೆ 100 ಎಕರೆ ಕೊಡುತ್ತೇವೆ:

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಜಾಗ ಗುರುತಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇನೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಈ ಮಾತು ಹಿಟ್ ಅಂಡ್ ರನ್ ಎಂಬಂತಾಗಬಾರದು. ಕೈಗಾರಿಕೆ ಸ್ಥಾಪನೆಗಾಗಿ ತಾಲೂಕಿನ ಬಸರಾಳು ಮತ್ತು ನಗರದ ಹೊರವಲಯದ ಉಮ್ಮಡಹಳ್ಳಿ ಬಳಿ ಜಾಗವಿದೆ. ಬಸರಾಳಿನಲ್ಲಿ 100 ಎಕರೆ ಸರ್ಕಾರಿ ಜಾಗವಿದೆ. ಹೆಚ್ಚುವರಿ ಜಾಗ ಬೇಕಿದ್ದರೆ ಭೂಸ್ವಾನ ಮಾಡಿಕೊಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹಾಜರಿದ್ದರು.