ಸಾರಾಂಶ
ಕಾರಟಗಿ: ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸಮೀಕ್ಷೆ ಮಾಡಿಸಿದ್ದು ನಮಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಇಡೀ ದೇಶಾದ್ಯಂತ ಸರ್ವೆ ಮಾಡಿಸುತ್ತಿದೆ. ಸರ್ವೆಗಳ ಬಗ್ಗೆ ನಮಗೂ ಗೊತ್ತಾಗುವುದಿಲ್ಲ. ಒಂದೊಮ್ಮೆ ಪ್ರಿಯಾಂಕಾ ಗಾಂಧಿ ಬಂದರೆ ಒಂದು ಲಕ್ಷಕ್ಕೂ ಅಧಿಕ ಲೀಡ್‌ನಿಂದ ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಒಬ್ಬ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅವರ ಲೀಡ್ ಗೆಲುವಿಗೆ ಜವಾಬ್ದಾರಿ ವಹಿಸಿಕೊಳ್ಳುವೆ ಎಂದರು.ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಇಡೀ ದೇಶಕ್ಕೆ ಕೊಪ್ಪಳ ಪರಿಚಯ ಆಗಲಿದೆ. ಕೇಂದ್ರದ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಅನುಕೂಲವಾಗಲಿದೆ. ಕೊಪ್ಪಳದಲ್ಲಿ ಆಗಿರುವ ಎಲ್ಲ ರೈಲ್ವೆ ಯೋಜನೆಗಳನ್ನು ಕಾಂಗ್ರೆಸ್ ಜಾರಿ ಮಾಡಿದೆ. ಬಸವರಾಜ ರಾಯರಡ್ಡಿ, ಎಚ್.ಜಿ. ರಾಮುಲು ನಂತರ ಯಾರೂ ಕೇಂದ್ರದ ಯೋಜನೆ ಕೊಪ್ಪಳಕ್ಕೆ ತಂದಿಲ್ಲ. ಕಳೆದ ಎರಡು ಬಾರಿ ಜನರ ಮನಸ್ಸು ಕೆಡಿಸಿ ಬಿಜೆಪಿಗರು ಗೆದ್ದಿದ್ದಾರೆ. ಕೊಪ್ಪಳ ಜನರು ಮೂರನೇ ಬಾರಿ ಮೋಸ ಹೋಗುವುದಿಲ್ಲ. ಇಲ್ಲಿನ ಜನರು ಪದೇ ಪದೇ ತಪ್ಪು ಮಾಡುವುದಿಲ್ಲ. ಈ ಬಾರಿ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.ಈಗಿನ ಸಂಸದರು ಹೊಸದಾದ ಒಂದು ಯೋಜನೆಯನ್ನು ತಂದಿದ್ದು ನಮಗೆ ನೆನಪಿಲ್ಲ. ರಾಯರಡ್ಡಿ ತಂದಿರುವ ಹಳೆಯ ಯೋಜನೆಗಳಿಗೆ ಅನುದಾನವನ್ನು ತಂದಿದ್ದೇ ಅವರ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.