ಸಾರಾಂಶ
ಯಲಬುರ್ಗಾ: ರಾಜ್ಯ ಕಾಂಗ್ರೆಸ್ ಸರ್ಕಾರ ಇಂತಹ ಬರದಲ್ಲೂ ರೈತರ ಹಿತ ಗಮನದಲ್ಲಿಟ್ಟುಕೊಂಡು ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ನೀಡುವಂತೆ ಸಿಎಂ ಭೇಟಿಯಾಗಿ ಮನವಿ ಮಾಡಿದರೂ ನೈಯಾ ಪೈಸೆ ನೀಡಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಆರೋಪಿಸಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಗುರುವಾರ ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ೨೦೨೩-೨೪ನೇ ಸಾಲಿನ ನಾನಾ ಯೋಜನೆಗಳಡಿ ಆಯ್ದ ಪಲಾನುಭವಿಗಳಿಗೆ ಸೌಲಭ್ಯ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈಗಾಗಲೇ ಕುಕನೂರ-ಯಲಬುರ್ಗಾ ತಾಲೂಕಿನ ರೈತರಿಗೆ ರಾಜ್ಯ ಸರ್ಕಾರ ಸುಮಾರು ೭೩ ಸಾವಿರ ರೈತರಿಗೆ ₹೮ ಕೋಟಿ ಬರ ಪರಿಹಾರ ಬಿಡುಗಡೆಯಾಗಿದೆ. ರೈತರಿಗೆ ೨ಸಾವಿರ ಅವರ ಖಾತೆಗೆ ಜಮಾ ಆಗಲಿದೆ ಎಂದರು.೨೦೧೩ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ತಾಲೂಕಿಗೆ ಕೃಷ್ಣೆ ನದಿಯಿಂದ ೩೬ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಕೃಷಿ ಭಾಗ್ಯ ಯೋಜನೆಗಳನ್ನು ಜಾರಿಗೆ ತರಲಾಯಿತು. ಮತ್ತೆ ೩೮ ಕೆರೆಗಳಿಗೆ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳಿಂದ ನೀರು ತುಂಬಿಸುವ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳಸಲಾಗುವುದು. ಆದರೆ ಬಿಜೆಪಿಯವರು ಈ ಎಲ್ಲ ಯೋಜನೆಗಳನ್ನು ನಮ್ಮ ಯೋಜನೆಗಳೆಂದು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಹರಿಹಾಯ್ದರು.ಈಗಾಗಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ತಾಲೂಕಿನಲ್ಲಿ ಕೃಷಿ ಇಲಾಖೆ ಮೂಲಕ ೫೫ ರೈತರಿಗೆ ಹಸುಗಳನ್ನು, ೩೨ಸ್ವಸಹಾಯ ಮಹಿಳಾ ಗುಂಪುಗಳಿಗೆ ೫೦ ಸಾವಿರ ಸಹಾಯಧನ ನೀಡಲಾಗುತ್ತಿದೆ. ಈ ವರ್ಷ ೭೦ ಕೃಷಿ ಹೊಂಡಗಳು ಮಂಜೂರಾಗಿವೆ. ಮುಂದಿನ ಆರ್ಥಿಕ ವರ್ಷದಲ್ಲಿ ೧ಸಾವಿರಕ್ಕೊ ಹೆಚ್ಚು ಕೃಷಿ ಹೊಂಡಗಳನ್ನು ಮಂಜೂರು ಮಾಡಿಸಿಕೊಡುತ್ತೇನೆ. ಇದರಿಂದ ರೈತರ ಬದುಕು ಹಸನನಾಗಲಿದೆ ಎಂದು ಹೇಳಿದರು.ನಾನು ಶಾಸಕನಾದ ಮೇಲೆ ತಾಲೂಕಿಗೆ ೮ ಪ್ರೌಢಶಾಲೆ, ೩ ಪದವಿ ಕಾಲೇಜು, ೧೩ ಹೊಸ ಬಸ್ ನಿಲ್ದಾಣ, ೬ ಕಲ್ಯಾಣ ಮಂಟಪಗಳನ್ನು ಹಾಗೂ ಮುಧೋಳ, ಯಡ್ಡೋಣಿ ಗ್ರಾಮಗಳಿಗೆ ಮೊರಾರ್ಜಿ ವಸತಿ ಸಹಿತ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ. ಇವುಗಳಿಗೆ ಸೂಕ್ತ ಜಾಗಗಳಿಲ್ಲ. ಆಯಾ ಸ್ಥಳೀಯ ಗ್ರಾಮಸ್ಥರು ಜಾಗಗಳನ್ನು ಕಲ್ಪಿಸಿಕೊಟ್ಟರೆ ಹೆಚ್ಚು ಅನುಕೂಲವಾಗುತ್ತದೆ. ಆದಷ್ಟು ತ್ವರಿತವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆಗೈದ ತಾಲೂಕಿನ ರೈತರನ್ನು ಸನ್ಮಾನ ಸನ್ಮಾನಿಸಲಾಯಿತು. ಬಾಲ ಗಾಯಕ ಅರ್ಜುನ ಇಟಗಿ ಪ್ರಾರ್ಥಿಸಿದರು.ಅತಿಥಿಗಳಾಗಿ ಜಂಟಿ ಕೃಷಿ ನಿರ್ದೇಶಕ ರುದ್ರೇಶ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಲ್ಲಾ ಕೃಷಿ ಅಧಿಕಾರಿ ಸಹದೇವ ಯರಗುಂಪಿ, ಜಿಲ್ಲಾ ಕೃಷಿಕ ಸಮಾಜಧ್ಯಕ್ಷ ತಿಮ್ಮಣ್ಣ ಚವಡಿ, ಯಂಕಣ್ಣ ಯರಾಶಿ, ವೀರನಗೌಡಗೌಡ ಬಳೂಟಗಿ, ಹನುಮಂತಗೌಡ ಪಾಟೀಲ, ಮಲ್ಲಿಕಾರ್ಜುನ, ಈರಪ್ಪ ಕುಡಗುಂಟಿ, ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಇದ್ದರು.