ಸಿದ್ದು ಸರ್ಕಾರದ ಒಂದು ವರ್ಷದ ಅಂಕಪಟ್ಟಿ ಬಿಡುಗಡೆ

| Published : May 22 2024, 12:46 AM IST

ಸಾರಾಂಶ

ಸಿದ್ದರಾಮಯ್ಯ ಸರ್ಕಾರದ ಒಂದು ವರ್ಷದ ಪರೀಕ್ಷೆಯಲ್ಲಿ ಸಂಪೂರ್ಣ ಫೇಲ್ ಆಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡದೆ, ಗ್ಯಾರಂಟಿ ನೆಪದಲ್ಲಿ ಬೊಕ್ಕಸ ಬರಿದು ಮಾಡಿ ನಿಂತ ನೀರಾಗಿರುವ ಕಾಂಗ್ರೆಸ್ ಸರ್ಕಾರ, ನಾಡಿನ ರೈತರು, ಶ್ರಮಿಕರು, ಮಹಿಳೆಯರು, ಯುವಕರು, ಉದ್ಯಮಿಗಳು, ಹಿಂದುಳಿದ ಸಮುದಾಯಗಳು ಸೇರಿದಂತೆ ವಿವಿಧ ವರ್ಗಗಳ ಹಿತಾಸಕ್ತಿಗಳನ್ನು ಕಡೆಗಣಿಸಿ ನಂಬಿ ಮತ ಹಾಕಿದ ಮತದಾರರ ಕಿವಿಗೆ ಹೂವಿಟ್ಟಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಂಕ ಪಟ್ಟಿಯನ್ನು ಬಿಡುಗಡೆ ಮಾಡಿ ಶೂನ್ಯ ಸಾಧನೆ ಕುರಿತಂತೆ ವ್ಯಂಗ್ಯವಾಡಿತು.

ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದ ಒಂದು ವರ್ಷದ ಪರೀಕ್ಷೆಯಲ್ಲಿ ಸಂಪೂರ್ಣ ಫೇಲ್ ಆಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡದೆ, ಗ್ಯಾರಂಟಿ ನೆಪದಲ್ಲಿ ಬೊಕ್ಕಸ ಬರಿದು ಮಾಡಿ ನಿಂತ ನೀರಾಗಿರುವ ಕಾಂಗ್ರೆಸ್ ಸರ್ಕಾರ, ನಾಡಿನ ರೈತರು, ಶ್ರಮಿಕರು, ಮಹಿಳೆಯರು, ಯುವಕರು, ಉದ್ಯಮಿಗಳು, ಹಿಂದುಳಿದ ಸಮುದಾಯಗಳು ಸೇರಿದಂತೆ ವಿವಿಧ ವರ್ಗಗಳ ಹಿತಾಸಕ್ತಿಗಳನ್ನು ಕಡೆಗಣಿಸಿ ನಂಬಿ ಮತ ಹಾಕಿದ ಮತದಾರರ ಕಿವಿಗೆ ಹೂವಿಟ್ಟಿದೆ ಎಂದು ಟೀಕಿಸಿದರು.

ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ದಾಖಲೆಯ ಬರ ಪರಿಹಾರ ಸಿಕ್ಕಿದೆ. ಆದರೆ, ಇನ್ನೂ ೨ ಲಕ್ಷ ರೈತರಿಗೆ ಪರಿಹಾರ ನೀಡಬೇಕಿದೆ. ಕೆಲವರಿಗೆ ೩೦೦, ೪೦೦ ರು. ಪರಿಹಾರ ನೀಡಿದ್ದಾರೆ. ಬಿತ್ತನೆ ಮಾಡಬೇಡಿ ಎಂದು ಮೊದಲಿಗೆ ಹೇಳಿ, ಈಗ ಬಿತ್ತನೆ ಮಾಡದವರಿಗೆ ಪರಿಹಾರ ನೀಡುತ್ತಿಲ್ಲ, ಇತ್ತ ಬೆಳೆಯೂ ಇಲ್ಲ, ಅತ್ತ ಪರಿಹಾರವೂ ಇಲ್ಲ ಎಂಬಂತೆ ರೈತರ ಹೊಟ್ಟೆಯ ಮೇಲೆ ಬರೆ ಎದೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಂಪೂರ್ಣ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು, ನೇಹಾ, ಅಂಜಲಿ ಕೊಲೆಯಾದರು. ಇನ್ನು ಯಾವ ಹೆಣ್ಣು ಮಕ್ಕಳು ಕೊಲೆಯಾಗುತ್ತಾರೆ ಎಂಬ ಆತಂಕವಿದೆ. ಹೆಣ್ಣು ಮಕ್ಕಳು ಕಾಲೇಜಿಗೆ ಹೋದರೆ ಗ್ಯಾರಂಟಿ ಇಲ್ಲ, ಮನೆಯಿಂದ ಆಚೆ ಬಂದರೆ ಗ್ಯಾರಂಟಿ ಇಲ್ಲ. ಸರ್ಕಾರ ಎಷ್ಟು ಉಚಿತ ನೀಡಿದರೂ ಬದುಕುವ ಗ್ಯಾರಂಟಿಯೇ ಇಲ್ಲ. ಸರ್ಕಾರ ಬಂದ ನಂತರ ವಿಧಾನ ಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಹೇಳಲು ಅನುಮತಿ ಸಿಕ್ಕಿದೆ. ಹನುಮಾನ್ ಚಾಲೀಸ ಕೇಳಿದರೆ, ಜೈಜೈ ಶ್ರೀರಾಮ್ ಎಂದರೆ ಹಲ್ಲೆಯಾಗುತ್ತಿದೆ. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ರಾಜ್ಯವನ್ನು ಕೊಲೆಗಡುಕರ ಸ್ವರ್ಗ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ, ಹಾಲು ಉತ್ಪಾದಕರಿಗೆ ಬರಬೇಕಾದ ಪ್ರೋತ್ಸಹದ ಹಣ, ಸಾಮಾಜಿಕ ಭದ್ರತಾ ಪಿಂಚಣಿ ಹಣ, ವಿಧವೆಯರ ಮಾಶಾಸನ, ದಲಿತರಿಗೆ ಮೀಸಲಿಟ್ಟ ಹಣ, ಗ್ಯಾರಂಟಿ ಯೋಜನೆಗಳಿಗೆ ಹೊಂದಿಸಲಾಗುತ್ತಿದೆ. ಹೊಸ ನೀರಾವರಿ ಯೋಜನೆಗಳಿಗೆ ಹಣವಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗವಿಲ್ಲ ದಂತಹ ಸಂಕಷ್ಟ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಂದೊಡ್ಡಿದೆ ಎಂದು ಟೀಕಿಸಿದರು.

ಬಿಜೆಪಿ ಮುಖಂಡರಾದ ವಿನೋಬ, ಪ್ರಸನ್ನಕುಮಾರ್, ಬಿ.ಟಿ.ಶಿವಲಿಂಗಯ್ಯ, ನಾಗಾನಂದ್, ಸುರೇಶ್, ಕೃಷ್ಣಪ್ಪ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.