ಪೊನ್ನಂಪೇಟೆ ಅಪ್ಪಚಕವಿ ವಿದ್ಯಾಲಯದಲ್ಲಿ ನಡೆದ ಗಣರಾಜ್ಯೋತ್ಸವ ಮತ್ತು ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ
ಶ್ರೀಮಂಗಲ : ವಿಶಿಷ್ಟ ಸಂಸ್ಕೃತಿ ಆಚಾರ ಪದ್ಧತಿ ಪರಂಪರೆಯನ್ನು ಹೊಂದಿರುವ ಪುಟ್ಟ ಜಿಲ್ಲೆ ಕೊಡಗು ಇಂದು ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದಂತ ಛಾಪನ್ನು ಮೂಡಿಸುತ್ತಿದ್ದು, ಯುವ ಜನಾಂಗ ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ಒಲಂಪಿಯನ್ ಚೆಪ್ಪುಡಿರ ಪೂಣಚ್ಚ ಕರೆ ನೀಡಿದರು.ಪೊನ್ನಂಪೇಟೆ ಅಪ್ಪಚಕವಿ ವಿದ್ಯಾಲಯದಲ್ಲಿ ನಡೆದ ಗಣರಾಜ್ಯೋತ್ಸವ ಮತ್ತು ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿ ಒಲಂಪಿಯನ್ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ ಪೂರ್ವಜರ ತ್ಯಾಗ ಬಲಿದಾನದಿಂದ ಇಂದು ಭಾರತವು ಪ್ರಕಾಶಿಸುತ್ತಿದೆ. ಯುವ ಜನತೆ ಭಾರತವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಅಲ್ಲದೆ ಶಾಲೆಯ ಪ್ರತಿಯೊಂದು ಚಟುವಟಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ ಪ್ರತಿಯೊಂದು ವಿದ್ಯಾರ್ಥಿಯಲ್ಲೂ ಸಾಕಷ್ಟು ಪ್ರತಿಭೆಗಳು ಇರುತ್ತದೆ ಶಿಕ್ಷಕರು ಇದನ್ನು ಗುರುತಿಸಿ ಹೊರ ತರುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು, ಮಕ್ಕಳನ್ನು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಲು ಪ್ರೋತ್ಸಾಹವನ್ನು ನೀಡಬೇಕು. ಹೀಗೆ ಮಾಡುವುದರಿಂದ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ವಿದ್ಯಾರ್ಥಿಗಳು ಉತ್ತಮ ಏಕಾಗ್ರತೆಯ ಮೂಲಕ ಉತ್ತಮ ಹವ್ಯಾಸ ಧ್ಯಾನ ಯೋಗ ಇವುಗಳ ಮುಖಾಂತರ ಮನಸ್ಸು ದೇಹ ಮತ್ತು ಬುದ್ಧಿಯನ್ನು ಸುಸ್ಥಿರವಾಗಿ ಇಟ್ಟುಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪೊನ್ನಂಪೇಟೆ ಕ್ರೀಡಾ ನಿಲಯ ಮುಖ್ಯ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ ಅವರನ್ನು ಸನ್ಮಾನ ಮಾಡಲಾಯಿತು. ಅಪ್ಪಚಕವಿ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪೊನ್ನಿಮಾಡ ಸುರೇಶ್, ಉಪಾಧ್ಯಕ್ಷ ಮೂಕಳೇರ ಕಾವ್ಯ ಕಾವೇರಮ್ಮ, ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ ಮುಖ್ಯ ಶಿಕ್ಷಕಿ ಮಲಚಿರ ತನುಜಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮಲಚಿರ ತನುಜಾ ವರದಿ ವಾಚಿಸಿದರು. ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ ಸ್ವಾಗತಿಸಿದರು. ವಿದ್ಯಾರ್ಥಿ ಸುನಿಲ್ ನಿರೂಪಿಸಿದರು. ವಿದ್ಯಾರ್ಥಿ ಅಜಿತ್ ನಿರ್ವಹಿಸಿದರು.
ಶಾಲಾ ಆಡಳಿತ ಮಂಡಳಿಯ ಖಜಾಂಚಿ ಆಲೆಮಾಡ ಸುಧೀರ್. ಸಹ ಕಾರ್ಯದರ್ಶಿ ಕಳ್ಳಿಚಂಡ ಚಿಪ್ಪ ದೇವಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಖಜಾಂಚಿ ಚೆಪ್ಪುಡಿರ ಕಾರ್ಯಪ್ಪ, ಪೋಷಕ ನಿರ್ದೇಶಕಿ ಚೀರಂಡ ಧನ್ಯ ದೇಚಮ್ಮ ಮತ್ತಿತರರು ಹಾಜರಿದ್ದರು.