ನಾಡದೋಣಿ ಮರಳು ಗಣಿಗಾರಿಕೆಗೆ ಅನುಮತಿ ನೀಡಲು ಮನವಿ

| Published : Oct 08 2024, 01:13 AM IST

ಸಾರಾಂಶ

ಮರಳು ಗಣಿಗಾರಿಕೆ ನಡೆಸುವವರು ಬಡವರಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ಸಾಂಪ್ರದಾಯಿಕ ನಾಡದೋಣಿ ಮರಳು ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಲಾಯಿತು.

ಕುಮಟಾ: ನಾಡದೋಣಿ(ಕೈದೋಣಿ) ಮೂಲಕ ಮರಳು ತೆಗೆಯಲು ಅನುಮತಿ ನೀಡಬೇಕು ಎಂದು ತಾಲೂಕಿನ ಅಘನಾಶಿನಿ ನದಿ ತಟವರ್ತಿ ನಿವಾಸಿ ಸಾಂಪ್ರದಾಯಿಕ ಮರಳುದಂಧೆ ಅವಲಂಬಿತರು ಸೋಮವಾರ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಿದರು.

ತಲೆತಲಾಂತರದಿಂದ ನಾಡದೋಣಿ ಹಾಗೂ ಕೈದೋಣಿಗಳ ಮೂಲಕ ಮರಳು ತೆಗೆಯುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಈ ಕಾಯಕದಿಂದಲೇ ನಮ್ಮ ಜೀವನ, ಮಕ್ಕಳ ಶಿಕ್ಷಣ ಇತ್ಯಾದಿ ನಡೆಯುತ್ತಿದ್ದವು. ಆದರೆ ಕಳೆದ ಸುಮಾರು ಹತ್ತು ವರ್ಷದಿಂದ ನಾಡದೋಣಿ ಮೂಲಕ ಮರಳು ದಂಧೆ ನಿಂತಿದೆ. ಏಕೆಂದರೆ ಮರಳು ತೆಗೆಯುವುದಕ್ಕೆ ಗುತ್ತಿಗೆ(ಲೀಸ್) ವ್ಯವಸ್ಥೆ ಜಾರಿಗೆ ಬಂದ ಆನಂತರ ಜಿಪಿಎಸ್ ಹೊಂದಿದ ದೊಡ್ಡ ದೋಣಿಗಳ ಮೇಲೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ದಂಧೆಯ ಅವಕಾಶ ಸಿಗುತ್ತಿದೆ. ಕೈದೋಣಿಗಳಿಗೆ ಅವಕಾಶ ನೀಡುತ್ತಿಲ್ಲ.

ಸಾಂಪ್ರದಾಯಿಕ ಮರಳು ದಂಧೆ ಇಲ್ಲದ್ದರಿಂದ ನಮ್ಮ ಜೀವನೋಪಾಯ ಕಷ್ಟವಾಗಿದೆ. ಉದ್ಯೋಗದಿಂದ ವಂಚಿತರಾಗಿರುವ ಬಡವರಾದ ಈ ನಮ್ಮ ಗೋಳನ್ನು ಅರ್ಥ ಮಾಡಿಕೊಂಡು, ಸರ್ಕಾರ ಈ ಹಿಂದೆ ಚಾಲ್ತಿಯಲ್ಲಿದ್ದಂತೆ ನಾಡದೋಣಿ(ಕೈದೋಣಿ)ಗಳ ಮೂಲಕ ಮರಳು ದಂಧೆಯನ್ನು ಪ್ರಾರಂಭಿಸಲು ಯೋಗ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಲ್ಲಿ ಸಂಪೂರ್ಣ ಮರಳು ಗಣಿಗಾರಿಕೆ ನಿಷೇಧ ಮಾಡಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇಂಥ ಸಮಸ್ಯೆ ಉಂಟಾಗದಂತೆ ನಿಗಾ ವಹಿಸಲಾಗಿತ್ತು. ಮರಳು ಇಲ್ಲದೇ ಅಭಿವೃದ್ಧಿ ಹಾಗೂ ನಿರ್ವಹಣೆ ಕಷ್ಟವಾಗಿದೆ. ಮರಳು ಗಣಿಗಾರಿಕೆ ನಡೆಸುವವರು ಬಡವರಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ಸಾಂಪ್ರದಾಯಿಕ ನಾಡದೋಣಿ ಮರಳು ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದರು.

ಅಣ್ಣಪ್ಪ ಆರ್. ನಾಯ್ಕ, ಸಂತೋಷ ಅಂಬಿಗ ಮಿರ್ಜಾನ, ರಣತುಂಗ ಅಂಬಿಗ, ಸತೀಶ ಅಂಬಿಗ, ಶಂಕರ ಗೌಡ ಮಣಕೋಣ, ನಾಗೇಶ ನಾಯ್ಕ ಕೊಡ್ಕಣಿ, ಗಣೇಶ ನಾಯ್ಕ, ಕಮಲಾಕರ ಗೌಡ ಇತರರು ಇದ್ದರು. ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಮನವಿ ಸ್ವೀಕರಿಸಿದರು. ತಹಸೀಲ್ದಾರ್‌ ರವಿರಾಜ ದೀಕ್ಷಿತ ಇದ್ದರು.