ಮಂಗಳೂರು: ಉತ್ತರ ಭಾರತಕ್ಕೆ ಸಾಗಿಸುವ ಕರ್ನಾಟಕದ ಅಡಕೆ ಕಂಟೈನರ್‌ ಗಳಿಗೆ ಗಡಿಯಲ್ಲಿ ಮಹಾರಾಷ್ಟ್ರ ಪೊಲೀಸರು ತಡೆ ಉಂಟು ಮಾಡುತ್ತಿರುವ ಬಗ್ಗೆ ಅಡಕೆ ಬೆಳೆಗಾರರ ಹಿತರಕ್ಷಣಾ ಸಂಸ್ಥೆ ಕ್ಯಾಂಪ್ಕೋ ಸಹಿತ ಅಡಕೆ ಬೆಳೆಗಾರರ ಸಹಕಾರ ಸಂಸ್ಥೆಗಳ ಮುಖಂಡರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆ ದೆಹಲಿಯಲ್ಲಿ ಮಂಗಳವಾರ ಮಾತುಕತೆ ನಡೆಸಿದರು.

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆಯೂ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಾಘವೇಂದ್ರ ಮತ್ತಿತರರು ಮಾತುಕತೆ ನಡೆಸಿದರು.ಕಳೆದ ಒಂದು ತಿಂಗಳಿಂದಿಚೆಗೆ ಕ್ಯಾಂಪ್ಕೋ ಸಹಿತ ಕರಾವಳಿ ಮತ್ತು ಮಲೆನಾಡಿನ ಸಹಕಾರಿ ಸಂಘಟನೆಗಳ ಅಡಕೆ ಲಾರಿಗಳನ್ನು ಗುಣಮಟ್ಟದ ನೆಪದಲ್ಲಿ ಮಹಾರಾಷ್ಟ್ರ ಪೊಲೀಸರು ಗಡಿಯಲ್ಲಿ ತಡೆದು ಕೇಸು ದಾಖಲಿಸುತ್ತಿದ್ದಾರೆ. ಮಾತ್ರವಲ್ಲ ಲಾರಿಗಳನ್ನು ಮುಟ್ಟುಗೋಲು ಹಾಕುತ್ತಿರುವ ಘಟನೆಗಳು ನಡೆಯುತ್ತಿದೆ. ಈಗಾಗಲೇ ಉತ್ತರ ಭಾರತಕ್ಕೆ ತೆರಳುವ 304 ಲಾರಿಗಳನ್ನು ಮುಟ್ಟಗೋಲು ಹಾಕಿದ್ದು ಕೇಸು ಕೂಡ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಕೆ ಬೆಳೆಗಾರರ ಸಹಕಾರಿ ಸಂಘಟನೆಗಳು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ತೊಂದರೆಯ ಬಗ್ಗೆ ವಿವರಿಸಿದೆ.

ಅದಕ್ಕೆ ಬೆಳೆಗಾರ ಸಂಘಟನೆಗಳ ಮನವಿಗೆ ಸ್ಪಂದಿಸಿದ ಸಿಎಂ ದೇವೇಂದ್ರ ಫಡ್ನವಿಸ್ ಅವರು, ಈಗಾಗಲೇ ವಶಪಡಿಸಿರುವ ಕಂಟೆನೆರ್ಗಳ ಬಿಡುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮಾತ್ರವಲ್ಲ ವಿನಾಕಾರಣ ಕೇಸು ದಾಖಲಿಸಿದಂತೆ ಪೊಲೀಸರಿಗೆ ಸೂಚನೆ ನೀಡುವುದಾಗಿಯೂ ಅವರು ಭರವಸೆ ನೀಡಿದರು. ನಿಯೋಗದಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ವ್ಯವಸ್ಥಾಪಕ ನಿರ್ದೇಶಕ ಡಾ. ಸತ್ಯನಾರಾಯಣ ಮತ್ತಿತರರು ಇದ್ದರು.