ಮಳೆ ಅಭಾವದಿಂದಾಗಿ ಕೃಷಿ ಕೆಲಸಗಳಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ರೈತರು ಬಿತ್ತನೆಗೆ ಮಾಡಿದ ಸಾಲ, ತುತ್ತಿನ ಚೀಲ ತುಂಬಿಸಿಕೊಳ್ಳಲು ಕೃಷಿ ಬಿಟ್ಟು ಗಾರೆ ಕೆಲಸದತ್ತ ಮುಖ ಮಾಡಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಮಳೆ ಅಭಾವದಿಂದಾಗಿ ಕೃಷಿ ಕೆಲಸಗಳಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ರೈತರು ಬಿತ್ತನೆಗೆ ಮಾಡಿದ ಸಾಲ, ತುತ್ತಿನ ಚೀಲ ತುಂಬಿಸಿಕೊಳ್ಳಲು ಕೃಷಿ ಬಿಟ್ಟು ಗಾರೆ ಕೆಲಸದತ್ತ ಮುಖ ಮಾಡಿದ್ದು, ಹುಬ್ಬಳ್ಳಿ ಈಗ ಕೃಷಿಕರಿಗೆ ತಾತ್ಕಾಲಿಕ ಉದ್ಯೋಗದ ಆಶ್ರಯ ತಾಣವಾಗಿ ಪರಿಣಮಿಸಿದೆ.

ಕೆಲ ವಾರಗಳ ಹಿಂದೆ ಕೈಯಲ್ಲಿ ಬೀಜ ಹಿಡಿದು ಹೊಲದಲ್ಲಿ ದುಡಿಯುತ್ತಿದ್ದ ರೈತರ ಕೈಯಲ್ಲಿ ಇಂದು ಗಾರೆ, ಪುಟ್ಟಿ ಮತ್ತು ಕಟ್ಟಡ ಕಾಮಗಾರಿಯ ಉಪಕರಣ ಕಾಣಿಸುತ್ತಿವೆ. ಧಾರವಾಡ, ಗದಗ, ಹಾವೇರಿ, ಕೊಪ್ಪಳ ಸೇರಿದಂತೆ ಸುತ್ತಮುತ್ತಲಿನ ಐದಾರು ಜಿಲ್ಲೆಗಳಿಂದ ನಿತ್ಯ ಸಾವಿರಾರು ರೈತರು ಮತ್ತು ಕೃಷಿ ಕೂಲಿಕಾರರು ಹುಬ್ಬಳ್ಳಿಗೆ ಆಗಮಿಸಿ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗುತ್ತಿದ್ದಾರೆ.

ಚೇತರಿಸಿಕೊಳ್ಳದ ಬೆಳೆ:

ಮುಂಗಾರು ಪೂರ್ವ ಉತ್ತಮ ಮಳೆ ಸುರಿದ ಪರಿಣಾಮ ರೈತರು ಸಾಲ ಮಾಡಿ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು. ನಂತರ ಮಳೆ ಕೈಕೊಟ್ಟ ಪರಿಣಾಮ ಜೋಳ, ಮೆಕ್ಕೆಜೋಳ, ತೊಗರಿ, ಹತ್ತಿ, ಸೋಯಾಬೀನ್ ಸೇರಿದಂತೆ ಹಲವು ಬೆಳೆ ಮೊಳಕೆಯೊಡೆಯದೆ ಭೂಮಿಯಲ್ಲಿ ಕಮರಿವೆ. ಈಗ ಸುರಿಯುತ್ತಿರುವ ತುಂತುರು ಮಳೆ ನೆರವಾಗುತ್ತಿಲ್ಲ. ಅಳಿದುಳಿದ ಬೆಳೆಯೂ ಚೇತರಿಸಿಕೊಳ್ಳುವ ಸಾಧ್ಯತೆಯೂ ಕ್ಷೀಣಿಸಿದೆ.

ಕೂಲಿಯೇ ಆಸರೆ:

ಕೃಷಿ ಆದಾಯದ ನಿರೀಕ್ಷೆ ಕಳೆದುಕೊಂಡ ರೈತರು ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಸಾಲದ ಕಂತು ಹಾಗೂ ದೈನಂದಿನ ಖರ್ಚು ಭರಿಸಲು ನಗರಗಳಲ್ಲಿ ಕೂಲಿ ಕೆಲಸ ಹುಡುಕುವ ಅನಿವಾರ್ಯ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಬೆಳಗ್ಗೆಯೇ ಹುಬ್ಬಳ್ಳಿಯ ರೈಲು ನಿಲ್ದಾಣದ ಮುಂಭಾಗ, ಹಳೇ ಹುಬ್ಬಳ್ಳಿ, ಬಂಕಾಪುರ ಚೌಕ್ ಸೇರಿದಂತೆ ವಿವಿಧೆಡೆ ಕೆಲಸಕ್ಕೆ ನಮ್ಮನ್ನು ಯಾರಾದರೂ ಕರೆದುಕೊಂಡು ಹೋಗುತ್ತಾರೆಯೇ ಎಂದು ಎದುರು ನೋಡುತ್ತಿದ್ದಾರೆ. ಕೆಲವೊಮ್ಮೆ ಕೆಲಸ ಸಿಗದೆ ಮರಳಿ ಹೋದ ಉದಾಹಣೆಗಳಿವೆ. ಸಿಕ್ಕರೆ ದಿನಕ್ಕೆ ಕೆಲಸಕ್ಕೆ ತಕ್ಕಂತೆ ₹ 500ರಿಂದ ₹ 800ರ ವರೆಗೂ ಕೂಲಿ ಸಿಗುತ್ತದೆ.

ಸರ್ಕಾರ ನೆರವಿಗೆ ಬರಲಿ:

ಜಗತ್ತಿಗೆ ಅನ್ನ ನೀಡುವ ಕೈಗಳೆ ಇಂದು ತುತ್ತು ಅನ್ನಕ್ಕಾಗಿ ಕಟ್ಟಡ ಕೆಲಸದಲ್ಲಿ ತೊಡಗಿವೆ. ಇಂತಹ ಸಮಯದಲ್ಲಿ ಸರ್ಕಾರ ತಕ್ಷಣ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ಕಲ್ಪಿಸಿ ಅನ್ನದ ಆಶ್ರಯ ನೀಡಬೇಕು ಎನ್ನುತಾರೆ ಕೂಲಿ ಕೆಲಸ ಹರಿಸಿ ಬಂದ ರೈತರು.

ನಮ್‌ ಸಂಕಷ್ಟ ಯಾರೂ ಕೇಳಂಗಿಲ್ರಿ. ಹೆಚ್ಚು ಮಳಿ ಬಂದು ಬೆಳಿ ಹಾಳಾಗುತ್ರಿ. ಮಳಿ ಬರದಿದ್ರ ಬಿತ್ತಿದ ಬೆಳೆಯಲ್ಲ ಒಣಗಿ ಹೋಕ್ಕಾವ್ರಿ. ನಮ್ಮ ಕಷ್ಟದ ಕೂಗು ಸರ್ಕಾರದ ಕಿವಿಗೆ ಬೀಳವಲ್ದು. ಊರಾಗ ಕೆಲಸ ಇಲ್ಲದಕ್ಕ ಪ್ಯಾಟಿಗೆ ಕೆಲಸ ಹುಡುಕ್ಕೊಂಡು ಬಂದೀನ್ರಿ.

ಪರಶುರಾಮ ವಾಲಿಕಾರ, ಕೆಲಸ ಅರಸಿ ಬಂದ ರೈತನಂದು 7 ಎಕರೆ ಜಮೀನಿದ್ದ್‌ ಮಳೆ ನಂಬಿ ಹೆಸರು ಬಿತ್ತನೆ ಮಾಡಿದ್ದೆ. ಮಳೆ ಇಲ್ಲದೆ ಬೆಳೆಯಲ್ಲ ಹಾಳಾಗಿದೆ. ಹೊಲಕ್ಕೆ ಹೋಗಿ ಬೆಳೆ ನೋಡಿದರೆ ಕಣ್ಣೀರು ಬರುತ್ತೆ. ಆ ದೇವರು ಇಂತಹ ಕಷ್ಟ ಯಾರಿಗೂ ಕೊಡಬಾರದು.

ಶಂಕ್ರಪ್ಪ ಮಳಗಿ, ಗದಗ ಜಿಲ್ಲೆ, ಕಣಗಿನಹಾಳದ ರೈತ