ಹನೂರಿನಲ್ಲಿ ಕಾಯಂ ನ್ಯಾಯಾಲಯ ಮಾರ್ಪಡಿಸುವಂತೆ ಸಿಎಂಗೆ ಮನವಿ

| Published : Apr 25 2025, 11:53 PM IST

ಸಾರಾಂಶ

ಹನೂರು ತಾಲೂಕು ಕೇಂದ್ರದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿರುವ ನ್ಯಾಯಾಲಯವನ್ನು ಕಾಯಂ ನ್ಯಾಯಾಲಯವನ್ನಾಗಿ ಮಾರ್ಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಕೀಲರ ಸಂಘದ ವತಿಯಿಂದ ಮಾಜಿ ಶಾಸಕ ಆರ್ ನರೇಂದ್ರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಹನೂರು: ತಾಲೂಕು ಕೇಂದ್ರದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿರುವ ನ್ಯಾಯಾಲಯವನ್ನು ಕಾಯಂ ನ್ಯಾಯಾಲಯವನ್ನಾಗಿ ಮಾರ್ಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ವಕೀಲರ ಸಂಘದ ವತಿಯಿಂದ ಮಾಜಿ ಶಾಸಕ ಆರ್.ನರೇಂದ್ರ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತಪೋಭವನದಲ್ಲಿ ಭೇಟಿ ಮಾಡಿ ಮಾಜಿ ಶಾಸಕರು ಹಾಗೂ ವಕೀಲರಾದ ಆರ್.ನರೇಂದ್ರ ಮಾತನಾಡಿ, ನೂತನ ಹನೂರು ತಾಲೂಕು ಕೇಂದ್ರದಲ್ಲಿ ಕಳೆದ 20 ತಿಂಗಳ ಹಿಂದೆ ತಾಲೂಕು ಕೇಂದ್ರದಲ್ಲಿರುವ ಅಪರ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಸಂಚಾರಿ ನ್ಯಾಯಾಲಯ ಪ್ರಾರಂಭಿಸಿ ವಾರದಲ್ಲಿ ನಾಲ್ಕು ದಿನಗಳು ಕಾರ್ಯಕಲಾಪಗಳು ನಡೆಯುತ್ತಿತ್ತು ತದನಂತರ ನ್ಯಾಯಾಧೀಶರು ವರ್ಗಾವಣೆಗೊಂಡ ನಂತರ ಸುಮಾರು ನಾಲ್ಕು ತಿಂಗಳು ಕಾಲ ನ್ಯಾಯಾಲಯದ ಕಾರ್ಯಕ್ರಮಗಳು ನಡೆಯದೆ ಕಕ್ಷಿದಾರರಿಗೆ ಸಾಕಷ್ಟು ತೊಂದರೆಯಾಗಿದೆ ಎಂದರು.

ಪ್ರಸ್ತುತ ತಾತ್ಕಾಲಿಕ ಸಂಚಾರಿ ನ್ಯಾಯಾಲಯವು ವಾರದ ನಾಲ್ಕು ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹನೂರು ತಾಲೂಕು ವಿಸ್ತಾರವಾದ ತಾಲೂಕಾಗಿರುವುದರಿಂದ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿದೆ. ಶೀಘ್ರ ನ್ಯಾಯ ವಿತರಣೆಗಾಗಿ ಹನೂರು ಪಟ್ಟಣದ ಸಂಚಾರಿ ನ್ಯಾಯಾಲಯವನ್ನು ಕಾಯಂ ನ್ಯಾಯಾಲಯವನ್ನಾಗಿ ಪರಿವರ್ತಿಸಿಕೊಳ್ಳಲು ಸರ್ಕಾರ ಅಧಿ ಸೂಚನೆ ಹೊರಡಿಸಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಆದಷ್ಟು ಬೇಗ ಸಂಚಾರಿ ನ್ಯಾಯಾಲಯವನ್ನು ಕಾಯಂ ನ್ಯಾಯಾಲಯವನ್ನಾಗಿ ಮಾಡಲು ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು. ಈ ವೇಳೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಸಿ, ಕಾರ್ಯದರ್ಶಿ ಮಹೇಶ್ ಕುಮಾರ್, ಪದಾಧಿಕಾರಿಗಳಾದ ಸಂಪತ್ ಕುಮಾರ್, ಪ್ರಕಾಶ್, ಪ್ರದೀಪ್ ನಾಯ್ಡು, ಅಬ್ದುಲ್ಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.