ಸಾರಾಂಶ
ಮುಧೋಳ ತಾಲೂಕಿನ ಮಾಚಕನೂರ ಗ್ರಾಮದಲ್ಲಿ ನೂತನ ವಾಗಿ ಸ್ಥಾಪಿಸಲಾದ ವಿದ್ಯುತ್ ಉಪ ಕೇಂದ್ರವನ್ನು ಸಚಿವ ಆರ್.ಬಿ.ತಿಮ್ಮಾಪೂರ ಉದ್ಘಾಟಿಸಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ಮುಧೋಳ ತಾಲೂಕಿನ ರೈತರು ಯಾವತ್ತೂ ನೀರು ಮತ್ತು ವಿದ್ಯುತ್ ಸಮಸ್ಯೆಯಿಂದ ಪರದಾಡಬಾರದು, ರೈತರು ಸಮೃದ್ಧವಾಗಿ ಬೆಳೆ ಬೆಳೆಯಲು ನೀರು ಅತ್ಯವಶ್ಯಕ. ರೈತರ ನೀರಾವರಿ ಪಂಪಸೆಟ್ ಗಳಿಗೆ ವಿದ್ಯುತ್ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಘಟಪ್ರಭ ನದಿಗೆ ಬ್ರಿಜ್ಡ್ ಕಂ ಬ್ಯಾರೇಜ್ ನಿರ್ಮಾಣ ಹಾಗೂ ವಿದ್ಯುತ್ ಸ್ಟೇಷನ್ ಗಳ ಸ್ಥಾಪಿಸಲು ಆದ್ಯತೆ ನೀಡಿದ್ದರ ಪರಿಣಾಮ ತಾಲೂಕಿನಲ್ಲಿ ನೀರು ಮತ್ತು ವಿದ್ಯುತ್ ಕೊರತೆ ಇಲ್ಲದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ತಾಲೂಕಿನ ಮಾಚಕನೂರ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಿದ 1-10 ಎ.ವ್ಹಿ.ಎ, 110-11 ಕೆ.ವಿ. ವಿದ್ಯುತ್ ಉಪಕೇಂದ್ರ ಉದ್ಘಾಟಿಸಿ ಮಾತನಾಡಿ, ಮಾಚಕನೂರ ಗ್ರಾಮದಲ್ಲಿ ನಿರ್ಮಿಸಿದ ವಿದ್ಯುತ್ ಉಪ ಕೇಂದ್ರದಿಂದ ಮಾಚಕನೂರ, ಆಲಗುಂಡಿ ಬಿ.ಕೆ, ಬುದ್ನಿ ಬಿ.ಕೆ, ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ನಿರಂತರ ವಿದ್ಯುತ್ ಪೂರೈಕೆ ಆಗಲಿದೆ, ಮುಂಚೆ ಈ ಗ್ರಾಮಗಳಲ್ಲಿ 180 ವೋಲ್ಟ್ (ಎಲ್.ಟಿ) ವಿದ್ಯುತ್ ದೊರೆಯುತ್ತಿದ್ದು, ಈಗ 230 ವೋಲ್ಟ್ (ಎಲ್.ಟಿ) ದೊರೆಯುತ್ತಿದೆ, ಸದ್ಯಕ್ಕೆ ಮಾಚಕನೂರ ವ್ಯಾಪ್ತಿಯಲ್ಲಿ ಒಟ್ಟು 2989 ಸ್ಥಾವರಗಳಿದ್ದು, ಅದರಲ್ಲಿ 1010 ಪಂಪಸೆಟ್‌ಗಳು ಮತ್ತು 1979 ಇತರೆ ವಿದ್ಯುತ್ ಸ್ಥಾವರಗಳು ಇವೆ. ಈ ಸ್ಥಾವರಗಳಿಗೆ ಗುಣಮಟ್ಟದ ವಿದ್ಯುತ್ ನ್ನು ಸಮರ್ಪಕವಾಗಿ ಪೂರೈಸಲಾಗುವುದೆಂದು ಹೇಳಿದರು.
ಕೆಡಿಪಿ ಸದಸ್ಯ ಬಸವರಾಜ ನಿಂ. ಹುಗ್ಗಿ ಮಾತನಾಡಿ, ಮುಳಗಡೆ ಸಂತ್ರಸ್ತರಿಗೆ ಸರ್ಕಾರದಿಂದ ಕೂಡಲೇ ಹಣ ಬಿಡುಗಡೆ ಮಾಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.ಕವಿಪ್ರನಿನಿ ಬಾಗಲಕೋಟೆ ವಲಯದ ಮುಖ್ಯ ಎಂಜಿನಿಯರ್ ಗುರುನಾಥ ಗೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಚಕನೂರ ಗ್ರಾಪಂ ಅಧ್ಯಕ್ಷ ಬಸವರಾಜ ಚಿಪ್ಪಲಕಟ್ಟಿ, ಮಹಾಂತೇಶ ಮಾಚಕನೂರ, ಅಶೋಕ ಕಿವಡಿ, ಸಂಗಪ್ಪ ಇಮ್ಮನ್ನವರ, ಕವಿಪ್ರನಿನಿ ಅಧಿಕಾರಿಗಳಾದ ಜಿ.ಕೆ. ಗೋಟ್ಯಾಳ, ರಮೇಶ ಪವಾರ, ಸಚಿನ ಆರ್. ಬೂದಿ, ಭೀಮಪ್ಪ ದಂಡೆಪ್ಪನವರ, ರಾಜೇಶ ಪಾಟೀಲ, ಸಂತೋಷ ಪಾಟೀಲ, ಎಂ.ಎಸ್. ದಡೂತಿ, ವೀರಣ್ಣ ಮರಕಟ್ಟಿ, ಸುರೇಶ ಮುರಗೋಡ ಹಾಗೂ ಕವಿಪ್ರನಿನಿ ಮತ್ತು ಹೆಸ್ಕಾ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.