ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಂದೆ ತಾಯಿ, ಗುರು ಹಿರಿಯರಿಗೆ ಗೌರವ ನೀಡುವವರಿಗೆ ಜಗತ್ತಿನಲ್ಲಿ ಎತ್ತರದ ಸ್ಥಾನ ಲಭಿಸಲಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಸಂವಿಧಾನಂದನಾಥ ಸ್ವಾಮೀಜಿ ಹೇಳಿದರು.ಪಟ್ಟಣದ ಮಯೂರ ವಿದ್ಯಾಲಯದ ಆವರಣದಲ್ಲಿ ಬಿಜಿಎಸ್ ಅನ್ನದಾನ ಸೇವಾ ಟ್ರಸ್ಟ್, ಬಿಜಿಎಸ್ ವಿದ್ಯಾನಿಧಿ, ಕಾಲಭೈರವ ಸೌಹಾರ್ದ ಸಹಕಾರ ಬ್ಯಾಂಕ್ ಹಾಗೂ ನೇಗಿಲ ಯೋಗಿ ಸೇವಾ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕಿನ ಒಕ್ಕಲಿಗ ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಹಾಯಧನ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು. ತಂದೆ ತಾಯಿಗಳ ಶ್ರಮ ಬೆವರಿನ ಫಲ ಹಾಗೂ ತ್ಯಾಗದಿಂದ ಮಕ್ಕಳು ಸಾಧನೆ ಮಾಡಲು ಸಾಧ್ಯ. ಉತ್ತಮ ಸಾಧನೆಯ ನಂತರ ತಮ್ಮ ಹೆತ್ತ ತಂದೆ ತಾಯಿಗಳನ್ನು ಮಕ್ಕಳು ದೂರ ಮಾಡುವಂತಹ ಪ್ರಕರಣಗಳು ಸಮಾಜದಲ್ಲಿ ಹೆಚ್ಚುತ್ತಿರುವುದು ವಿಷಾದನೀಯ. ಇಂದಿನ ಮಕ್ಕಳಿಗೆ ಸಾಧನೆಗೆ ಬೇಕಾದ ಪೂರಕ ವಾತಾವರಣ ಸೃಷ್ಟಿ ಮಾಡುವುದರ ಜೊತೆಗೆ ತಮ್ಮ ಮಕ್ಕಳಿಗೆ ಶಿಸ್ತು, ಸಂಸ್ಕಾರ ದೇಶದ ಸಂಸೃತಿಯನ್ನು ತಂದೆ ತಾಯಿಗಳು ಕಲಿಸಬೇಕಿದೆ. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಮಕ್ಕಳು ಉನ್ನತ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ನೀಡಬೇಕು. ನಿಮ್ಮ ಸಾಧನೆಗೆ ಹೆಚ್ಚು ಪ್ರೋತ್ಸಾಹ ನೀಡುವ ತಂದೆ ತಾಯಿಗಳು ವೃದ್ಧಾಪ್ಯದಲ್ಲಿರುವ ವೇಳೆ ಮಕ್ಕಳು ಅವರನ್ನು ಪ್ರೀತಿ ವಾತ್ಸಲ್ಯದಿಂದ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಿಇಒ ಸೋಮಶೇಖರ್ ಮಾತನಾಡಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದೆ. ಸರ್ಕಾರದ ಜೊತೆಯಲ್ಲಿ ಸಂಘ ಸಂಸ್ಥೆಗಳು ಶಿಕ್ಷಣದ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿವೆ. ಇದು ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದರು. ಈ ಸಂಧರ್ಭದಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಹಾಯಧನ ವಿತರಿಸಲಾಯಿತು ಹಾಗೂ ದಾನಿಗಳನ್ನು ಸಹ ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ 625 ಕ್ಕೆ 623 (ಶೇ 99.68) ಅಂಕಗಳಿಸಿ ರಾಜ್ಯಕ್ಕೆ ಮೂರನೇ, ಜಿಲ್ಲೆಗೆ ಎರಡನೇ, ತಾಲೂಕಿಗೆ ಮೊದಲನೇ ಸ್ಥಾನಗಳಿಸಿದ ಕೋಳಾಲದ ಜೈಗಿರಿ ಸುಂದರ್ ರವರ ಮಗಳು ಕೆ.ಜೆ.ಅಂಕಿತಾಳನ್ನು ಗಣ್ಯರು ಗೌರವಿಸಿದರು. ಕಾರ್ಯಕ್ರಮದಲ್ಲಿ ಬಿಜಿಎಸ್ ಅನ್ನದಾನ ಸೇವಾ ಟ್ರಸ್ಟ್ ಅಧ್ಯಕ್ಷ ಚಂದ್ರೇಗೌಡ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಪಿ.ಎಚ್.ಧನಪಾಲ್, ನೇಗಿಲ ಯೋಗಿ ಸೇವಾ ಸಮಾಜ ತಾಲೂಕು ಅಧ್ಯಕ್ಷ ರಂಗನಾಥ್, ಪ್ರೊ. ಪುಟ್ಟರಂಗಪ್ಪ, ಉದ್ಯಮಿ ಕೆಂಪಯ್ಯ, ಭೈರವಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ, ಪಟ್ಟಣ ಪಂಚಾಯಿತಿ ಸದಸ್ಯೆ ಸ್ವಪ್ನನಟೇಶ್ ಸೇರಿದಂತೆ ಸಮಾಜದ ಮುಖಂಡರು, ದಾನಿಗಳು, ಪೋಷಕರು ವಿದ್ಯಾರ್ಥಿಗಳು ಇದ್ದರು.