ಸಾರಾಂಶ
ತ್ಯಾಮಗೊಂಡ್ಲು ಹೋಬಳಿಯ ಮುರಾರಯ್ಯನ ಪಾಳ್ಯದ ನಿವಾಸಿ ಜಿ.ಹನುಮಂತರಾಯಪ್ಪ (61) ಕೊಲೆಯಾದ ದುರ್ದೈವಿ.ಕಳೆದ ಒಂದು ವರ್ಷದ ಹಿಂದೆಯಷ್ಟೇ ತಾಲೂಕಿನ ಗೋರಘಟ್ಟ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ನಿವೃತ್ತಿ ಹೊಂದಿದ್ದರು.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ನಿವೃತ್ತ ಶಿಕ್ಷಕನನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಅಡ್ಡಗಟ್ಟಿ ಕೊಲೆಮಾಡಿ ಹಣದೊಂದಿಗೆ ಪರಾರಿಯಾಗಿರುವ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣೆ ವ್ಯಾಪ್ತಿ ಮುರಾರಯ್ಯನ ಪಾಳ್ಯದ ಬಳಿಯ ನೀಲಗಿರಿ ತೋಪಿನಲ್ಲಿ ಸಂಭವಿಸಿದೆ.ತ್ಯಾಮಗೊಂಡ್ಲು ಹೋಬಳಿಯ ಮುರಾರಯ್ಯನ ಪಾಳ್ಯದ ನಿವಾಸಿ ಜಿ.ಹನುಮಂತರಾಯಪ್ಪ (61) ಕೊಲೆಯಾದ ದುರ್ದೈವಿ.
ಕಳೆದ ಒಂದು ವರ್ಷದ ಹಿಂದೆಯಷ್ಟೇ ತಾಲೂಕಿನ ಗೋರಘಟ್ಟ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ನಿವೃತ್ತಿ ಹೊಂದಿದ್ದರು. ಸೋಮವಾರ ಮಧ್ಯಾಹ್ನದ ವೇಳೆಗೆ ತ್ಯಾಮಗೊಂಡ್ಲು ನಗರದಲ್ಲಿರುವ ಕೆನರಾ ಬ್ಯಾಂಕ್‍ನಲ್ಲಿ 3 ಲಕ್ಷ ರು.ಗಳ ನಗದನ್ನು ಪಡೆದುಕೊಂಡು ಮುರಾರಯ್ಯನ ಪಾಳ್ಯದಲ್ಲಿರುವ ತಮ್ಮ ಮನೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಬೇಕಾದ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಾಗ ಹಿಂಬಾಲಿಸಿ ಹೋದ ದುಷ್ಕರ್ಮಿಗಳು ಘೋರಘಟ್ಟ - ಮುರಾರಯ್ಯನಪಾಳ್ಯದ ಮಾರ್ಗಮಧ್ಯೆ ಯಾರೂ ಇಲ್ಲದ್ದನ್ನು ಗಮನಿಸಿ, ರಸ್ತೆ ಪಕ್ಕದ ನೀಲಗಿರಿ ತೋಪಿನಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದು, ಹಣ ದೋಚಿ ಎಸ್ಕೇಪ್ ಆಗಿದ್ದಾರೆ.ಬ್ಯಾಂಕಿನಲ್ಲಿ ಹಣ ಸ್ವೀಕರಿಸಿದನ್ನು ಗಮನಿಸಿರುವ ದುಷ್ಕರ್ಮಿಗಳು ಹನುಮಂತರಾಯಪ್ಪ ಅವರನ್ನು ಹಿಂಬಾಲಿಸಿಕೊಂಡು ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಮೃತರು ಪತ್ನಿ ಮತ್ತು ಒಬ್ಬ ಮಗಳನ್ನು ಅಗಲಿದ್ದಾರೆ.
ಪರಿಶೀಲನೆ:ಘಟನಾ ಸ್ಥಳಕ್ಕೆ ಬೆಂಗ್ರಾ ಜಿಲ್ಲಾ ಎಎಸ್ಪಿ, ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಜಗದೀಶ್, ತ್ಯಾಮಗೊಂಡ್ಲು ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ರಂಜನ್ ಕುಮಾರ್ ಸೇರಿ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡ ತ್ಯಾಮಗೊಂಡ್ಲು ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಿದ್ದಾರೆ.