ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಡಾ ನೀಡಿದ್ದ ನಿವೇಶನ ವಾಪಸ್ ಕೊಟ್ಟರೆ ತಪ್ಪು ಒಪ್ಪಿಕೊಂಡಂತೆ ಹೇಗಾಗುತ್ತದೆ? ಈ ಪ್ರಕರಣದಲ್ಲಿ ನನ್ನ ಪಾತ್ರವಾದರೂ ಏನಿದೆ? ನಾನು ತಪ್ಪು ಮಾಡಿಲ್ಲ ಎಂದ ಮೇಲೆ ರಾಜೀನಾಮೆ ನೀಡುವ ಅಗತ್ಯವಿಲ್ಲ, ರಾಜೀನಾಮೆ ನೀಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಮುಡಾ ನಿವೇಶನಗಳನ್ನು ವಾಪಸ್ ನೀಡಿರುವುದರಿಂದ ತಪ್ಪು ಒಪ್ಪಿಕೊಂಡಂತೆ ಆಗಿಲ್ಲ. ಮುಡಾ ನಿವೇಶನ ಪ್ರಕರಣದಲ್ಲಿ ನನ್ನ ಪಾತ್ರವೇನು? ಎಂದು ಪ್ರಶ್ನಿಸಿದರು.ವಿರೋಧ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಾನು ರಾಜೀನಾಮೆ ನೀಡುವುದರಿಂದ ಎಲ್ಲವೂ ಮುಗಿಯುತ್ತದೆಯೇ? ಅನಗತ್ಯವಾಗಿ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ನಾನು ತಪ್ಪು ಮಾಡಿಲ್ಲ ಎಂದ ಮೇಲೆ ರಾಜೀನಾಮೆ ಏಕೆ ನೀಡಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಡಿನೋಟಿಫೈ ಪ್ರಕರಣ ಬಂದಾಗ ಅವರ ರಾಜೀನಾಮೆಗೆ ತಾವು ಆಗ್ರಹಿಸಿದ್ದ ವಿಡಿಯೋ ಹರಿದಾಡುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ಯಡಿಯೂರಪ್ಪ ಅವರ ಪ್ರಕರಣಕ್ಕೂ ನನ್ನ ಪ್ರಕರಣಕ್ಕೂ ವ್ಯತ್ಯಾಸವಿದೆ. ಅವರದ್ದು ಡಿನೋಟಿಫೈ ಪ್ರಕರಣ. ನಾನು ಯಾವುದೇ ಡಿನೋಟಿಫಿಕೇಷನ್ ಮಾಡಿಲ್ಲ. ಹಣ ವರ್ಗಾವಣೆ ಮಾಡಿಲ್ಲ. ಮುಡಾ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ಹಾಗಾಗಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.ಯಾವುದೇ ಹಣ ವರ್ಗಾವಣೆ ನಡೆದಿಲ್ಲ ಎನ್ನುತ್ತಿದ್ದೀರಿ. ಆದರೆ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದವರು ಇಸಿಐಆರ್ ದಾಖಲಿಸಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಯಾವ ಆಧಾರದಲ್ಲಿ ಪ್ರಕರಣ ದಾಖಲು ಮಾಡಿದ್ದಾರೋ ಗೊತ್ತಿಲ್ಲ. ಈ ಪ್ರಕರಣದಲ್ಲಿ ಹಣಕಾಸು ವರ್ಗಾವಣೆಯಾಗಿಲ್ಲ. ಜಮೀನಿನ ಬದಲಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ನನ್ನ ಪ್ರಕಾರ ಮನಿ ಲಾಂಡರಿಂಗ್ ಆಗುವುದಿಲ್ಲ’ ಎಂದು ಹೇಳಿದರು.
----ಪತ್ನಿಗೆ ಆದ ಮಾನಸಿಕ ಹಿಂಸೆ ಬಗ್ಗೆ ವಿಷಾದವಿದೆ - ಸೈಟ್ ವಾಪಸ್ ಪತ್ನಿಯ ನಿರ್ಧಾರ: ಸಿಎಂ
ಕನ್ನಡಪ್ರಭ ವಾರ್ತೆ ಬೆಂಗಳೂರುಮುಡಾ ಪ್ರಕರಣದಲ್ಲಿ ನನ್ನ ವಿರುದ್ಧ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನೂ ವಿವಾದಕ್ಕೆ ಎಳೆದು ತಂದಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು. ಈ ದ್ವೇಷದ ರಾಜಕಾರಣಕ್ಕೆ ನನ್ನ ಪತ್ನಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿದ್ದಕ್ಕೆ ನನಗೆ ವಿಷಾದವಿದೆ. ಆದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.------ಸೈಟ್ ವಾಪಸ್ ಪತ್ನಿಯ ಸ್ವತಂತ್ರ ನಿರ್ಧಾರ: ಸಿಎಂ
ಕನ್ನಡಪ್ರಭ ವಾರ್ತೆ ಬೆಂಗಳೂರುಮುಡಾ ನೀಡಿದ್ದ 14 ನಿವೇಶನಗಳನ್ನು ವಾಪಸ್ ಮಾಡಿರುವುದು ತಮ್ಮ ಪತ್ನಿ ಕೈಗೊಂಡ ಸ್ವತಂತ್ರ ನಿರ್ಧಾರ. ಈ ಬಗ್ಗೆ ನನ್ನ ಜೊತೆಗೆ ಚರ್ಚೆ ಮಾಡಿರಲಿಲ್ಲ ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ನಿಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ಉಡುಗೊರೆ ರೂಪದಲ್ಲಿ ನೀಡಿದ್ದ 3.16 ಎಕರೆ ಜಮೀನು ಅದಾಗಿತ್ತು. ಮುಡಾದವರು ಅದನ್ನು ಸ್ವಾಧೀನಕ್ಕೆ ಪಡೆದುಕೊಂಡು ಸೈಟ್ ಮಾಡಿ ಹಂಚಿಕೆ ಮಾಡಿದ್ದರು. ಬದಲಿ ನಿವೇಶನವಾಗಿ ಮೈಸೂರಿನ ವಿಜಯನಗರದಲ್ಲಿ ನೀಡಿದ್ದರು. ನಾವೇನು ವಿಜಯನಗರದಲ್ಲೇ ಕೊಡಿ ಎಂದು ಕೇಳಿರಲಿಲ್ಲ. ಆದರೆ ಈಗ ವಿವಾದದಿಂದ ಮನನೊಂದು ನನ್ನ ಯಜಮಾನರಿಗೆ ರಾಜಕೀಯ ತೇಜೋವಧೆ ಆಗುತ್ತಿದೆ, ಹಾಗಾಗಿ ಸೈಟ್ ಬೇಡವೇ ಬೇಡ ಎಂದು ವಾಪಸ್ ಕೊಟ್ಟಿದ್ದಾರೆ ಎಂದರು.