ಕನ್ನಡಪ್ರಭ ವಾರ್ತೆ ಬೆಳಗಾವಿ
ಕಂದಾಯ ಇಲಾಖೆಯ ಸೇವೆಗಳು ಅರ್ಹ ನಾಗರಿಕರಿಗೆ ಯಾವುದೇ ವಿಳಂಬವಿಲ್ಲದೇ ಸಕಾಲದಲ್ಲಿ ತಲುಪಬೇಕು. ಸಾರ್ವಜನಿಕರ ಕಡತಗಳನ್ನು ಅನಗತ್ಯವಾಗಿ ಬಾಕಿ ಉಳಿಸದೇ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಡಿಸಿಎಂ, ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಡಳಿತ ವತಿಯಿಂದ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ, ಪತ್ರಿಕಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಕಂದಾಯ ಇಲಾಖೆಯ ಹೊಣೆಗಾರಿಕೆ ಮತ್ತಷ್ಟು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ತ್ವರಿತ ಹಾಗೂ ಪರಿಣಾಮಕಾರಿ ಸೇವೆ ಒದಗಿಸುವುದು ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.ಕಂದಾಯ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೇ ಜನರಿಗೆ ಉತ್ತಮ ಸೇವೆ ಒದಗಿಸುವ ಸಂಕಲ್ಪದ ದಿನವಾಗಬೇಕು. ಇಲಾಖೆಯ ಅಧಿಕಾರಿಗಳು ಪ್ರತಿವರ್ಷ ಆತ್ಮಾವಲೋಕನ ಮಾಡಿಕೊಂಡು ಸೇವೆಯ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕಂದಾಯ ಇಲಾಖೆಯ ಎಲ್ಲ ಸೇವೆಗಳು ಸರಳವಾಗಿ ಹಾಗೂ ಸಕಾಲದಲ್ಲಿ ಅರ್ಹರಿಗೆ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.ಪತ್ರಿಕೆಗಳು ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತ ಹಾಗೂ ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಬೇಕು. ಯಾವುದೇ ಸುದ್ದಿ ಅಥವಾ ಲೇಖನ ಪ್ರಕಟಿಸುವ ಮುನ್ನ ಅದರ ಸಾಮಾಜಿಕ ಪರಿಣಾಮವನ್ನು ಪರಿಗಣಿಸಬೇಕು ಎಂದು ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮಗಳ ಪಾತ್ರ ಶ್ಲಾಘಿಸಿದರು.ಜನರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅಮೂಲ್ಯವಾಗಿದ್ದು, ಸಮಾಜ ಅವರ ಕೊಡುಗೆಯನ್ನು ಸದಾ ಸ್ಮರಿಸಬೇಕು ಎಂದು ತಿಳಿಸಿ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯ ಸಮುದಾಯಕ್ಕೆ ಶುಭಾಶಯ ಕೋರಿದರು.ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳು ಹಾಗೂ ಹಕ್ಕುಪತ್ರಗಳನ್ನು ವಿತರಿಸಿದ ಡಾ.ಪರಮೇಶ್ವರ, ಕಂದಾಯ ಇಲಾಖೆ, ಕ್ರೀಡಾ ಕ್ಷೇತ್ರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಬೆಳಗಾವಿ ವಿಭಾಗದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.180 ಪತ್ರಕರ್ತರಿಗೆ ಮೀಡಿಯಾ ಕಿಟ್
ಹಿಂದುಳಿದ ವರ್ಗಗಳ ಮಾಧ್ಯಮ ಪ್ರತಿನಿಧಿಗಳಿಗಾಗಿ ರಾಜ್ಯ ಸರ್ಕಾರದಿಂದ ಒಟ್ಟು 180 ಪತ್ರಕರ್ತರಿಗೆ ಲ್ಯಾಪ್‌ಟಾಪ್ ಹಾಗೂ ಕ್ಯಾಮೆರಾ ಒಳಗೊಂಡ ಮೀಡಿಯಾ ಕಿಟ್ ವಿತರಿಸುವ ಯೋಜನೆ ಜಾರಿಯಲ್ಲಿದ್ದು, ಅದರ ಅಂಗವಾಗಿ ಕಾರ್ಯಕ್ರಮದಲ್ಲಿ ಐವರು ಪತ್ರಕರ್ತರಿಗೆ ಸಾಂಕೇತಿಕವಾಗಿ ಮೀಡಿಯಾ ಕಿಟ್ ವಿತರಿಸಲಾಯಿತು.