ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಪ್ರತಿಯೊಂದು ಪ್ರದೇಶ ವಿಭಾಗಕ್ಕೂ ತನ್ನದೇ ಆದ ವೈವಿಧ್ಯಮಯ ಸಂಸ್ಕೃತಿ, ಭಾಷೆ, ಸಾಹಿತ್ಯ ಸೇರಿದಂತೆ ಅನೇಕ ವಿಭಿನ್ನ ರೀತಿಯ ನಿಯಮಗಳು ಇರುತ್ತವೆ. ಆದರೆ ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಕರ್ನಾಟಕದಲ್ಲಿ ಇತ್ತೀಚಿಗೆ ಹಿಂದಿಯ ಏರಿಕೆ ಹೆಚ್ಚಾಗುತ್ತಿದ್ದು, ಕರ್ನಾಟಕ ರಾಜ್ಯ ಇವತ್ತು ರಾಷ್ಟ್ರೀಯತೆಯ ಕೆಳಗಡೆ ಸಿಲುಕಿ ಕನ್ನಡದ ಪ್ರಾದೇಶಿಕತೆ ಮತ್ತು ವೈವಿಧ್ಯಮಯ ಭಾಷೆ ಸಾಹಿತ್ಯ ಸಂಸ್ಕೃತಿಗಳು ನೇಪತ್ತಿಗೆ ಸರಿಯುತ್ತಿವೆ ಎಂದು ಸಂಗೀತ ಲೋಕದ ದಿಗ್ಗಜ ಬ್ರಹ್ಮ ಹಂಸಲೇಖ ಅವರು ಕಳವಳ ವ್ಯಕ್ತಪಡಿಸಿದ್ದರು.ನಗರ ಹೊರ ವಲಯದ ಬೆಳಗುಂಬದ ರಾಜರಾಜೇಶ್ವರಿ ವಿದ್ಯಾಸಂಸ್ಥೆಯು ನಡೆದ 2024 ನೇ ಸಾಲಿನ ಕಾಲಾವೈಭವದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ದಕ್ಷಿಣ ಭಾರತವನ್ನು ಕರ್ನಾಟಕ ದೇಶ ಕನ್ನಡ ದೇಶ ಎಂದು ಕರೆಯುತ್ತಿದ್ದರು. ಸೌತ್ ಇಂಡಿಯಾ ಎಂಬ ಹೆಸರು ಬರುವ ಮೊದಲು ಕನ್ನಡ ಪ್ರಾದೇಶಿಕ ತೆರಿಗೆ ತನ್ನದೇ ಆದ ಇತಿಹಾಸವಿತ್ತು. ಆದರೆ ಇಂದು ಅದರ ವೈವಿಧ್ಯಮಯ ವಿಭಿನ್ನತೆ ಮಾಯವಾಗಿ ಮುಂಬರುವ ಐದು ವರ್ಷದಲ್ಲಿ ಇಡೀ ದಕ್ಷಿಣ ಭಾರತ ಇಂಗ್ಲಿಷ್ ಮಾಯವಾಗಿ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ. ಸದ್ಯದ ಮಟ್ಟಿಗೆ ಶಾಲಾ ಮಕ್ಕಳಿಗೆ ತಂದೆ ತಾಯಂದಿರೂ ಕೂಡ ಇಂಗ್ಲಿಷ್ ವ್ಯಾಮೋಹವನ್ನೇ ರೂಡಿಸುತ್ತಿದ್ದು, ಇದು ಸೂಚನೀಯವಾದ ಸಂಗತಿ ಎಂದು ತಿಳಿಸಿದರು. ಪ್ರತಿ ಪ್ರಾದೇಶಿಕತೆಗೂ ತನ್ನದೇ ಆದ ಭಾಷೆ ವೈವಿಧ್ಯಮಯ ಭೌಗೋಳಿಕತೆ ಇರುತ್ತದೆ. ಅದೇ ರೀತಿಯಾಗಿ ನಮಗೂ ಕೂಡ ನಮ್ಮ ಮನೆಗಳ ಜಮೀನುಗಳ ಹಕ್ಕು ಪತ್ರಗಳು ಇದ್ದ ಹಾಗೆ ಕರ್ನಾಟಕವೇ ನಮ್ಮ ಹಕ್ಕುಪತ್ರವಾಗಿದೆ. ಹಕ್ಕು ಪತ್ರದ ಸ್ವಾಧೀನತೆಯನ್ನು ನಾವು ಹೊಂದಬೇಕಾಗಿದ್ದು, ಈ ನಮ್ಮ ಸ್ವತ್ತನ್ನ ಕಾಪಾಡುವ ಅನಿವಾರ್ಯತೆ ಎದುರಾಗಿದೆ ಎಂದರು.
ನಮ್ಮ ಹಕ್ಕಿನ ಭಾಷೆಯನ್ನ ಕಲೆ, ಸಿನಿಮಾ, ಕಥೆ, ಸಾಹಿತ್ಯ, ಶಿಕ್ಷಣ ಸೇರಿದಂತೆ ಓದಿನ ಮೂಲಕ ಕರ್ನಾಟಕ ಕನ್ನಡದ ಇತಿಹಾಸ ಐತಿಹ್ಯವನ್ನು ಸಾಕ್ಷಿಕರಿಸಬೇಕಾಗಿದೆ ಎಂದರು.ತುಮಕೂರು ಹೊರವಲಯದ ಪ್ರಕೃತಿಯ ನಿಸರ್ಗದ ಮಡಿನಲ್ಲಿ ಸ್ವಚ್ಛಂದವಾಗಿರುವ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯು ಬೆಟ್ಟದ ತಪ್ಪಲಿನಲ್ಲಿ ಗುರುಕುಲದಂತೆ ಇದೆ. ಇಲ್ಲಿ ಇಂಗ್ಲಿಷ್ ಭಾಷೆಯ ಜೊತೆ ಜೊತೆಗೆ ಕನ್ನಡದ ಕಂಪನ್ನ ಪಸರಿಸುವುದರ ಜವಾಬ್ದಾರಿಯು ಶಿಕ್ಷಣ ಸಂಸ್ಥೆಯ ಮೇಲಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಹೊರ ತರುವುದು ಕೂಡ ಗುರು ತರಹದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಮಕ್ಕಳ ಪ್ರತಿಭೆಯನ್ನು ಗುರುತಿಸಿದ ನಾದ ಬ್ರಹ್ಮ ಹಂಸಲೇಖ ಅವರು ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ರಾಜರಾಜೇಶ್ವರಿ ಪಿಯು ಕಾಲೇಜಿನ ಡಾ. ವೆಂಕಟೇಶ್, ಶಿಕ್ಷಣ ತಜ್ಞ ಹಾಗೂ ಮಹರ್ಷಿ ವಿದ್ಯಾಸಂಸ್ಥೆಯ ಮುಖ್ಯಸ್ಥ ನೀಲಕಂಠ ಪಿಲ್ಲೈ ಅವರು ಸೇರಿದಂತೆ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.