ಸಾರಾಂಶ
ಜನವರಿ ೨೨ ರಂದು ಅಯೋಧ್ಯಾ ನಗರಿಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದ್ದು, ಶತಮಾನಗಳ ಹೋರಾಟದ ಫಲಶ್ರುತಿ ನಮ್ಮ ಜೀವಮಾನದಲ್ಲಿ ಲಭಿಸುತ್ತಿದೆ ಎನ್ನಲು ಸಂತಸವಾಗುತ್ತಿದೆ ಎನ್ನುತ್ತಾರೆ ಕರಸೇವಕ ಹರಿರಾಮಚಂದ್ರ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಅದು ೧೯೯೦ರ ಕರಸೇವೆ. ಬಲಿದಾನಕ್ಕೂ ಸಿದ್ಧರಾಗಿ ಬನ್ನಿ. ಶ್ರೀರಾಮನಿಗಾಗಿ ಏನೇ ಕಷ್ಟ ಎದುರಾದರೂ ಪಲಾಯನಗೈಯುವುದಿಲ್ಲ ಎಂದು ಶಪಥ ತೊಟ್ಟು ಬನ್ನಿ ಎಂದು ತಿಳಿಸಲಾಗಿತ್ತು. ನಂಬಿದ ಶ್ರೀ ರಾಮನ ರಕ್ಷಣೆ ಇಲ್ಲದಿದ್ದರೆ ನಾವು ಜೀವಂತವಾಗಿ ಹಿಂತಿರುಗುತ್ತಿರಲಿಲ್ಲ. ಮುಲಾಯಂ ಸಿಂಗ್ ಸರ್ಕಾರದಿಂದ ಎದುರಾದ ಅಡೆತಡೆಗಳನ್ನೆಲ್ಲ ಎದುರಿಸಿ ಅಯೋಧ್ಯೆ ತಲುಪಿದಾಗ ಡಾ. ಕಲ್ಲಡ್ಕ ಪ್ರಭಾಕರ ಭಟ್ ಎದುರಾದರು. ‘ಈ ಸಂಕಷ್ಟದ ನಡುವೆಯೂ ಬಂದಿಯಾ ಮಾರಾಯ’ ಎಂದಾಗ ನನಗೆ ರೋಮಾಂಚನವಾಗಿತ್ತು. ಉಪ್ಪಿನಂಗಡಿಯ ರಾಮನಗರ ನಿವಾಸಿ ಹರಿರಾಮಚಂದ್ರ ತಮ್ಮ ಕರಸೇವೆ ಅನುಭವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದು ಹೀಗೆ...ಒಂದು ಹಕ್ಕಿಯೂ ಅಯೋಧ್ಯೆ ಕಟ್ಟಡದ ಮೇಲೆ ಹಾರಾಡಲು ಬಿಡೋದಿಲ್ಲ ಎಂದಿದ್ದ ಅಂದಿನ ಉ.ಪ್ರ. ಮುಖ್ಯಮಂತ್ರಿಯ ಘೋಷಣೆಯ ಬಳಿಕ ನಮ್ಮ ಕರಸೇವೆಯು ಸುಲಲಿತವಾಗಿರುವುದಿಲ್ಲ ಎನ್ನುವುದು ತಿಳಿದಿತ್ತು. ಆದರೆ ಗುರಿ ಮುಟ್ಟುವ ನಿರ್ಧಾರ ನಮ್ಮದಾಗಿತ್ತು. ಅದಕ್ಕಾಗಿ ರೈಲಿನಲ್ಲಿ ನಮ್ಮ ಇಡೀ ತಂಡ ಸಂಶಯ ಬಾರದಂತೆ ನಟಿಸುತ್ತಿತ್ತು. ಆದಾಗ್ಯೂ ರೈಲಿನಲ್ಲಿ ಅಲ್ಲಲ್ಲಿ ಪೊಲೀಸರು ವಿಚಾರಿಸುತ್ತಿದ್ದರು. ಪ್ಶೆಜಾಬಾದ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ನಮ್ಮನ್ನು ಪೊಲೀಸರು ರೈಲಿನಿಂದ ಇಳಿಸಿದ್ದರು. ಬೇರೆ ಬೇರೆ ರಾಜ್ಯಗಳಿಂದ ಬಂದ ಕರಸೇವಕರು ದಾರಿ ಮಧ್ಯೆ ರೈಲಿನಿಂದ ಇಳಿಸಿದ್ದಕ್ಕೆ ಪ್ರತಿಭಟಿಸಿದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಕರಸೇವಕರ ರಕ್ಷಣೆಗೆ ಸ್ಥಳೀಯರು ಧಾವಿಸಿ ಬಂದು ಪೊಲೀಸರ ಬಲಪ್ರಯೋಗದಿಂದ ನಮ್ಮನ್ನು ರಕ್ಷಿಸಿದರಾದರೂ ನಿರ್ಬಂಧಕ್ಕೆ ತುತ್ತಾದೆವು. ಸರಕಾರದಿಂದ ಕಟ್ಟಾಜ್ಞೆ ಇರುವುದರಿಂದ ನನ್ನ ಕಾರ್ಯವ್ಯಾಪ್ತಿಯಿಂದ ನಿರ್ಗಮಿಸಬೇಕೆಂದು ಪೊಲೀಸ್ ಅಧಿಕಾರಿ ವಿನಂತಿಸಿದ್ದ. ಬಳಿಕ ಸ್ಥಳೀಯ ವ್ಯಕ್ತಿಯ ಸಹಾಯದಿಂದ ನದಿಯೊಂದನ್ನು ದಾಟಿ ಪೊಲೀಸ್ ಪಹರೆ ಇಲ್ಲದ ಕಾಡುಮೇಡುಗಳಲ್ಲಿ ಬರೋಬ್ಬರಿ ೬ ದಿನಗಳ ಕಾಲ ನಡೆದು ಅಯೋಧ್ಯೆ ತಲುಪಿದ್ದೆವು. ಆ ಮಧ್ಯೆ ಅಯೋಧ್ಯೆಯಲ್ಲಿ ಗೋಲಿಬಾರ್ ನಡೆದು ಮೂರು ದಿನಗಳಾಗಿದ್ದವು. ಎಲ್ಲೆಡೆ ಬಲಿದಾನ ಗೈದವರ ಬಗ್ಗೆ ನೋವು ತುಂಬಿದ ಭಾವನೆ ಇತ್ತು. ಕರಸೇವಕರ ಹೆಣಗಳು ಪತ್ತೆಯಾಗಿ ರೋಧನ- ಆಕ್ರೋಶ ಮುಗಿಲು ಮುಟ್ಟಿದ್ದವು. ಡಾ. ಭಟ್ ಕಾರ್ಯವೈಖರಿಗೆ ಬೆರಗಾದೆ: ನಮ್ಮನ್ನು ವಿಶ್ರಾಂತಿಗೆಂದು ವಿಶಾಲ ಕಟ್ಟಡಕ್ಕೆ ಹೋಗಲು ಸೂಚಿಸಿದರು. ಅಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕೈ ಕಾಲಿಗೆ ಬ್ಯಾಂಡೇಜು ಹಾಕಿಕೊಂಡು ಮುಂದಿನ ಕಾರ್ಯತಂತ್ರಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ನನ್ನನ್ನು ನೋಡಿದವರೇ ಸಂತಸ ಹಾಗೂ ಆಶ್ಚರ್ಯ ಚಕಿತರಾಗಿ ‘ಈ ಸಂಕಷ್ಠದ ನಡುವೆಯೂ ಬಂದಿಯಾ ಮಾರಾಯ’ ಎಂದರು. ಈ ಮಾತನ್ನು ಕೇಳಿದಾಗ ಸವಾಲುಗಳನ್ನು ಎದುರಿಸಿ ಗುರಿ ಮುಟ್ಟಿದ ಬಗ್ಗೆ ರೋಮಾಂಚನಗೊಂಡೆ. ಜೊತೆಗೆ ಕಲ್ಲಡ್ಕ ಪ್ರಭಾಕರ ಭಟ್ ಅವರ ನೈಜ ನಾಯಕತ್ವದ ಕಾರ್ಯವೈಖರಿ ಕಂಡು ಭಾವ ಪರವಶನಾದೆ. ಅತ್ಯುಗ್ರ ರೀತಿಯಲ್ಲಿ ಸರ್ಕಾರ ಕರಸೇವಕರ ದಮನ ಕಾರ್ಯಕ್ಕೆ ಮುಂದಾಗಿದ್ದರೂ, ಸಾಮಾನ್ಯ ಕಾರ್ಯಕರ್ತರ ಜೊತೆ ತಾನೇ ಖುದ್ದು ಮುಂಚೂಣಿ ನೇತೃತ್ವ ವಹಿಸಿ, ದೃಢ ಚಿತ್ತದಿಂದ ಅಯೋಧ್ಯೆ ತಲುಪಿ , ಹೋರಾಟದಲ್ಲಿ ಗಾಯಗೊಂಡರೂ ಧೃತಿಗೆಡದೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದ ಅವರ ಕಾರ್ಯ ಶೈಲಿ ಬೆರಗು ಮೂಡಿಸುತ್ತಿತ್ತು. ರೈಲಿನಿಂದ ಜೈಲಿಗೆ: ರೈಲಿನಿಂದ ಇಳಿಸಲ್ಪಟ್ಟ ನಮ್ಮನ್ನು ಆ ರಾತ್ರಿ ಯಾವುದೋ ಫ್ಯಾಕ್ಟರಿಯಂತಹ ಕಟ್ಟಡದಲ್ಲಿ ಕೂಡಿ ಹಾಕಿದ್ದರು. ಬಳಿಕ ನಾವೆಲ್ಲ ನಮ್ಮ ನಮ್ಮ ಊರಿಗೆ ಹಿಂತಿರುಗಬೇಕೆಂಬ ಷರತ್ತು ಮುಂದೊಡ್ಡಿ ನಮ್ಮನ್ನು ನಾಲ್ಕು ದಿನಗಳ ಬಳಿಕ ಬಿಡುಗಡೆಗೊಳಿಸಿದ್ದರು. ಪೂರ್ವ ಯೋಜನೆಯಂತೆ ಸ್ಥಳೀಯ ಮಾರ್ಗದರ್ಶಕರ ಸಹಕಾರ ಪಡೆದು ಪೊಲೀಸ್ ಪಹರೆ ಇಲ್ಲದ ಅಪಾಯಕಾರಿ ಪಥವನ್ನು ಆಯ್ಕೆ ಮಾಡಿಕೊಂಡೆವು. ಪೊಲೀಸರ ಭೀತಿ ಒಂದೆಡೆಯಾದರೆ, ಪೊಲೀಸರ ವೇಷದಲ್ಲಿರುವ ಗೂಂಡಾಗಳ ಅಪಾಯವೂ ನಮಗೆ ಎದುರಾಗಿತ್ತು. ಕರಸೇವಕರ ಬಗ್ಗೆ ಸ್ಥಳೀಯ ಮಂದಿ ಅತೀವ ಗೌರವ ಹಾಗೂ ಪ್ರೀತಿ ತೋರುತ್ತಿದ್ದರಿಂದ ಅಲ್ಲಲ್ಲಿ ಆತಿಥ್ಯ ಒದಗಿಸುತ್ತಿದ್ದರಿಂದ ಸಂಕಷ್ಟದ ನಡುವೆಯೂ ಸಂಭ್ರಮದ ಅನುಭವ ಆಗುತ್ತಿತ್ತು. ಮೈಚುಚ್ಚುವ ಗಿಡಗಂಟಿಗಳ ನಡುವೆ ಮೈಕೊರೆಯುವ ಚಳಿಯನ್ನು ಎದುರಿಸಿ ಸಾಗುವ ಅನಿವಾರ್ಯತೆ ನಮ್ಮದಾಗಿತ್ತು. ನಡೆದು ನಡೆದು ಕಾಲು ಬಾವು ಆಗಿತ್ತು. ಮಾತೆಯರು ಮತ್ತು ಮಕ್ಕಳು ಅಲ್ಲಲ್ಲಿ ನಮಗೆ ಆತಿಥ್ಯವನ್ನು ನೀಡಿ ನಮ್ಮ ಯಾತ್ರೆಗೆ ದಾರಿಯನ್ನು ತೋರಿಸುತ್ತಿದ್ದ ಕಾರಣ ೬ ದಿನಗಳ ಕಾಡುಮೇಡುಗಳಲ್ಲಿನ ಕಾಲ್ನಡಿಗೆ ಯಾತ್ರೆ ಪೂರ್ಣಗೊಳಿಸಿ ಅಯೋಧ್ಯೆ ತಲುಪಿದ್ದೆವು. ಅಯೋಧ್ಯೆ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ನನ್ನೂರು: ಸಂಘ ಪರಿವಾರದ ನೆಲೆಗಟ್ಟಿನಲ್ಲಿ ಕಡಬ ಪ್ರಖಂಡದಲ್ಲಿದ್ದ ಉಪ್ಪಿನಂಗಡಿಯು ಅಯೋಧ್ಯಾ ಚಳುವಳಿ ಮುಂಚೂಣಿ ಪಾತ್ರವನ್ನು ವಹಿಸಿತ್ತು. ಮೊತ್ತ ಮೊದಲಾಗಿ ಅಯೋಧ್ಯಾ ಮಂದಿರದ ಬೀಗ ತೆರೆಯಬೇಕೆಂದು ೧೯೮೬ ರ ಸುಮಾರಿಗೆ ಕೈಗೊಂಡ ರಾಮಜನ್ಮಭೂಮಿ ಮುಕ್ತಿ ಯಜ್ಞ ಆಂದೋಲನ ಉಪ್ಪಿನಂಗಡಿಯಲ್ಲಿ ಯಶಸ್ವಿಯಾಗಿ ನಡೆದಿತ್ತು. ೯ ದಿನಗಳ ಕಾಲ ನಡೆದ ಈ ಸತ್ಯಾಗ್ರಹ ಚಳುವಳಿಯಲ್ಲಿ ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಿದ್ದರು. ಬಳಿಕ ನಡೆದ ರಾಮಜಾನಕಿ ರಥ ಯಾತ್ರೆ, ಶ್ರೀ ರಾಮ ಪಾದುಕಾ ರಥಯಾತ್ರೆ, ಶ್ರೀ ರಾಮ ಶಿಲಾ ಪೂಜನ ರಥ ಯಾತ್ರೆಯಲ್ಲಿಯೂ ಉಪ್ಪಿನಂಗಡಿಯಲ್ಲಿ ಅಭೂತಪೂರ್ವ ಯಶಸ್ಸು ಲಭಿಸಿತ್ತು.ನಿಜವಾಯಿತು ಕಲ್ಲಡ್ಕ ಭಟ್ ಆಶಯ: ೧೯೯೧ರಲ್ಲಿ ಕರಸೇವೆಯಲ್ಲಿ ಭಾಗವಹಿಸಿದ್ದ ಕರಸೇವಕರಿಗೆ ಕಲ್ಲಡ್ಕ ಪ್ರಭಾಕರ ಭಟ್ ಅವರು ಪೋಸ್ಟ್ ಕಾರ್ಡ್ ಬರೆದು, ಅದರಲ್ಲಿ ‘ಈ ನಮ್ಮ ಪುಣ್ಯ ಪವಿತ್ರ ಮಾತೃ ಭೂಮಿಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣ ಕಾರ್ಯದಿಂದ ಆರಂಭಗೊಂಡು ತಾಯಿ ಭಾರತಿಯು ನಮ್ಮ ಜೀವನ ಮೌಲ್ಯಗಳ ಪರಿಮಳವನ್ನು ಜಗತ್ತಿಗೆಲ್ಲಾ ಬೀರುವ ದಿನಗಳು ಬರುವ ವರೆಗೆ ನಾವು ವಿರಮಿಸುವುದಿಲ್ಲ. ಹಾಗೂ ಅದಕ್ಕೆ ಬೇಕಾಗಿರುವ ಹಿಂದೂ ಸಂಘಟನೆಯ ಕಾರ್ಯವನ್ನು ಇನ್ನಷ್ಟು ವೇಗದಿಂದ ಮುಂದುವರೆಸುತ್ತೇನೆಂದು ಪ್ರತಿಜ್ಞೆ ಮಾಡೋಣ’ ಎಂದು ಕರೆ ನೀಡಿದ್ದರು. ಅಂದು ಅವರು ವ್ಯಕ್ತಪಡಿಸಿದ ಆಶಯ ಇಂದು ನಿಜವಾಗುತ್ತಿದೆ. ಜನವರಿ ೨೨ ರಂದು ಅಯೋಧ್ಯಾ ನಗರಿಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದ್ದು, ಶತಮಾನಗಳ ಹೋರಾಟದ ಫಲಶ್ರುತಿ ನಮ್ಮ ಜೀವಮಾನದಲ್ಲಿ ಲಭಿಸುತ್ತಿದೆ ಎನ್ನಲು ಸಂತಸವಾಗುತ್ತಿದೆ ಎನ್ನುತ್ತಾರೆ ಕರಸೇವಕ ಹರಿರಾಮಚಂದ್ರ.