ಸಾರಾಂಶ
ಕರ್ನಾಟಕ ಪಾಂತ್ರ ರೈತ ಸಂಘದ ಹೋರಾಟದ ಒತ್ತಡಕ್ಕೆ ಮಣಿದು ಸರ್ಕಾರ ಬಗರ್ ಹುಕುಂ ರೈತರಿಗೆ ಫಾರಂ ನಂಬರ್ 57 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಆ ಅರ್ಜಿಗಳನ್ನು ಇನ್ನೂ ಸಹ ವಿಲೇವಾರಿ ಮಾಡಿರುವುದಿಲ್ಲ. ಅಲ್ಲದೆ ಸಾಗುವಳಿ ಪತ್ರ ಇಲ್ಲದ ಕಾರಣ ಸರ್ಕಾರಿ ಸವಲತ್ತುಗಳು, ಸಾಲ ಸೌಲಭ್ಯ, ಬರ ಪರಿಹಾರ ಇತ್ಯಾದಿ ಸೌಲಭ್ಯಗಳಿಂದ ಈ ಸಾಗುವಳಿ ರೈತರು ವಂಚಿತರಾಗಿದ್ದಾರೆ
ಕನ್ನಡಪ್ರಭ ವಾರ್ತೆ ಹುಣಸೂರು
ಕಳೆದ 50-60ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಬಡ ಬಗರ್ ಹುಕುಂಮೇ ಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘದ ಸದಸ್ಯರು ಒತ್ತಾಯಿಸಿ ಪ್ರತಿಭಟಿಸಿದರು.ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು ಬಗರ್ ಹುಕುಂ ರೈತರ ಕಡೆಗಣನೆ ಸಲ್ಲದು, ಸಾಗುವಳಿ ಪತ್ರ ನೀಡಿ ರೈತರನ್ನು ಉಳಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಕರ್ನಾಟಕ ಪಾಂತ್ರ ರೈತ ಸಂಘದ ಹೋರಾಟದ ಒತ್ತಡಕ್ಕೆ ಮಣಿದು ಸರ್ಕಾರ ಬಗರ್ ಹುಕುಂ ರೈತರಿಗೆ ಫಾರಂ ನಂಬರ್ 57 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಆ ಅರ್ಜಿಗಳನ್ನು ಇನ್ನೂ ಸಹ ವಿಲೇವಾರಿ ಮಾಡಿರುವುದಿಲ್ಲ. ಅಲ್ಲದೆ ಸಾಗುವಳಿ ಪತ್ರ ಇಲ್ಲದ ಕಾರಣ ಸರ್ಕಾರಿ ಸವಲತ್ತುಗಳು, ಸಾಲ ಸೌಲಭ್ಯ, ಬರ ಪರಿಹಾರ ಇತ್ಯಾದಿ ಸೌಲಭ್ಯಗಳಿಂದ ಈ ಸಾಗುವಳಿ ರೈತರು ವಂಚಿತರಾಗಿದ್ದಾರೆ ಎಂದರು.ನಗರದ 10 ಕಿ.ಮಿ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆಲ್ಲ ಈ ಭೂಮಿಯೇ ಜೀವನಾಧಾರವಾಗಿರುವುದರಿಂದ ಇವರಿಗೆ ಸಾಗುವಳಿ ಪತ್ರ ನೀಡಬೇಕು ಹಾಗೂ ತಕ್ಷಣವೇ ದರಕಾಸ್ತು (ಅಕ್ರಮ-ಸಕ್ರಮ) ಸಮಿತಿಯನ್ನು ರಚಿಸಿ ಕೂಡಲೇ ವಿಲೇವಾರಿ ಮಾಡಿದೇ ಬಾಕಿ ಇರುವ ಅರ್ಜಿಗಳನ್ನು ಯಾವುದೇ ತಾರತಮ್ಯ ಮಾಡದೇ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಪುಟ್ಟರಾಜು, ಸದಸ್ಯರು ಮತ್ತು ಬಗರ್ಹುಕುಂ ರೈತರು ಇದ್ದರು.ತಹಸೀಲ್ದಾರ್ ಮಂಜುನಾಥ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.