‘ಎದ್ದೇಳು ಕನ್ನಡಿಗ ಕೆಆರ್‌ಎಸ್‌ ಪಕ್ಷಸೇರು ಬಾ’ ಅಭಿಯಾನಕ್ಕೆ ಚಾಲನೆ

| Published : Oct 07 2025, 02:00 AM IST

‘ಎದ್ದೇಳು ಕನ್ನಡಿಗ ಕೆಆರ್‌ಎಸ್‌ ಪಕ್ಷಸೇರು ಬಾ’ ಅಭಿಯಾನಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಆರ್‌ಎಸ್‌ ಪಕ್ಷದ ‘ಎದ್ದೇಳು ಕನ್ನಡಿಗ-ಕೆಆರ್‌ಎಸ್‌ ಪಕ್ಷ ಸೇರು ಬಾ’ ಸದಸ್ಯತ್ವ ಅಭಿಯಾನಕ್ಕೆ ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಸೋಮವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷವು ಹಮ್ಮಿಕೊಂಡಿರುವ ‘ಎದ್ದೇಳು ಕನ್ನಡಿಗ-ಕೆಆರ್‌ಎಸ್‌ ಪಕ್ಷ ಸೇರು ಬಾ’ ಸದಸ್ಯತ್ವ ಅಭಿಯಾನಕ್ಕೆ ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಚಾಲನೆ ನೀಡಿದರು.

ಸೋಮವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಆರ್‌ಎಸ್‌ ಪಕ್ಷದ ಪ್ರಾಮಾಣಿಕ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಅತಿ ಹೆಚ್ಚು ಹೋರಾಟ ಮಾಡಿರುವ ಏಕೈಕ ಪಕ್ಷ ಕೆಆರ್‌ಎಸ್‌. ಕರ್ನಾಟಕ ಉಳಿಸಬೇಕು ಮತ್ತು ಭ್ರಷ್ಟಾಚಾರ ತೊಲಗಿಸಬೇಕೆಂದರೆ, ಕೆಆರ್‌ಎಸ್‌ ಪಕ್ಷಕ್ಕೆ ಅವಕಾಶ ನೀಡಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದರು.

ಕನ್ನಡಿಗರು ಅನುಭವಿಸುತ್ತಿರುವ ನೋವುಗಳಿಗೆ ನಮ್ಮನ್ನು ಆಳಿರುವ ಎಲ್ಲಾ ಪಕ್ಷಗಳು ಕಾರಣ. ಅವರವರ ಸ್ವಾರ್ಥ ಸಾಧನೆಗೆ ರಾಜ್ಯವನ್ನು ಬಲಿಕೊಟ್ಟಿದ್ದಾರೆ. ನಾವು ನಿಮ್ಮ ಜೊತೆ ನಿಲ್ಲುತ್ತೇವೆ. ನೆಲ, ಜಲ, ಭಾಷೆ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಮುಂದಿನ ನವೆಂಬರ್ ತಿಂಗಳಲ್ಲಿ ಒಂದು ದೊಡ್ಡ ಸಮಾವೇಶ ಮಾಡೋಣ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೆಆರ್‌ಎಸ್‌ ಪಕ್ಷದ ಸದಸ್ಯತ್ವ ಪಡೆಯಿರಿ ಎಂದು ಕರೆ ನೀಡಿದರು. ಈ ಅಭಿಯಾನ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಮೂರು ತಂಡಗಳಲ್ಲಿ ಸದಸ್ಯತ್ವ ಅಭಿಯಾನ:

ಕೆಆರ್‌ಎಸ್‌ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ, ಉಪಾಧ್ಯಕ್ಷರಾದ ಎಸ್‌.ಮಂಜುನಾಥ್‌ ಮತ್ತು ಕೆ.ಎಸ್‌.ಸೋಮಸುಂದರ್‌ ನೇತೃತ್ವದಲ್ಲಿ ಮೂರು ತಂಡಗಳು ಇಂದಿನಿಂದ ಅ.16ರ ವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಸದಸ್ವತ್ವ ಅಭಿಯಾನ ನಡೆಸಲಿವೆ. ಅಂತೆಯೆ ಪಕ್ಷದ ಜಿಲ್ಲಾ ಸಮಿತಿಗಳು ಈ ತಿಂಗಳಾದ್ಯಂತ ತಾಲೂಕು ಕೇಂದ್ರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಭಿಯಾನ ಮುಂದುವರೆಸಲಿವೆ.

ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ, ರಾಜ್ಯ ಉಪಾಧ್ಯಕ್ಷರಾದ ಎಸ್‌.ಮಂಜುನಾಥ್‌, ಕೆ.ಎಸ್‌.ಸೋಮಸುಂದರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್‌, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಆನಂದ್, ಸೋಣ್ಣಪ್ಪ ಗೌಡ, ಹಬೀಬ್, ಆರೋಗ್ಯ ಸ್ವಾಮಿ ಉಪಸ್ಥಿತರಿದ್ದರು.